ಬೆಳಗಾವಿ: ನಗರದ ಶಹಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬೆಳಗಾವಿ ಪೊಲೀಸರ ‘ಅಕ್ಕ ಪಡೆ’ ಸಕಾಲದಲ್ಲಿ ದಾಳಿ ನಡೆಸಿ ತಡೆಯುವಲ್ಲಿ ಯಶಸ್ವಿಯಾಗಿದೆ.
ಬೆಳಗಾವಿ ನಗರದ ಶಹಪೂರದ ಶಾಸ್ತ್ರಿ ನಗರದ ನಿವಾಸಿಯಾದ 13 ವರ್ಷದ ಬಾಲಕಿಗೆ ಮೂಡಲಗಿ ಮೂಲದ ವ್ಯಕ್ತಿಯೊಂದಿಗೆ ವಿವಾಹ ಮಾಡಲು ಸಿದ್ಧತೆ ನಡೆಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಅಕ್ಕ ಪಡೆಯ ಸಿಬ್ಬಂದಿಗಳು ಜಂಟಿಯಾಗಿ ಬಾಲಕಿಯ ಮನೆಗೆ ಭೇಟಿ ನೀಡಿದರು.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯ ವಯಸ್ಸಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿದಾಗ, ಬಾಲಕಿಗೆ ಕೇವಲ 13 ವರ್ಷ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿಲೀಪ ಪಿ. ನಿಂಬಾಳಕರ್ ಅವರ ಮಾರ್ಗದರ್ಶನದಲ್ಲಿ ಅಕ್ಕ ಪಡೆ ಹಾಗೂ ಮಕ್ಕಳ ಸಹಾಯವಾಣಿ ತಂಡವು ತಕ್ಷಣವೇ ವಿವಾಹ ಕಾರ್ಯವನ್ನು ಸ್ಥಗಿತಗೊಳಿಸಿತು.
ರಕ್ಷಿಸಲ್ಪಟ್ಟ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ (CWC) ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಬಾಲಕಿಗೆ ಸೂಕ್ತ ರಕ್ಷಣೆ ನೀಡಲಾಗಿದೆ. ಅಪ್ರಾಪ್ತ ಮಗಳಿಗೆ ಬಾಲ್ಯವಿವಾಹ ಮಾಡಲು ಮುಂದಾದ ಬಾಲಕಿಯ ತಂದೆಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾನೂನು ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗಿನ ವಿರುದ್ಧ ಬೆಳಗಾವಿ ಪೊಲೀಸರು ತೋರಿದ ಈ ತ್ವರಿತ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.