ನವದೆಹಲಿ: ತಾನು ದೊಡ್ಡ ಉದ್ಯಮಿ ಹಾಗೂ ಕ್ರಿಕೆಟ್ ವಲಯದ ಪ್ರಭಾವಿ ವ್ಯಕ್ತಿ ಎಂದು ನಂಬಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಐಷಾರಾಮಿ ಜೀವನಶೈಲಿ ಪ್ರದರ್ಶಿಸಿ 20ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು 23 ವರ್ಷದ ವಿಕ್ರಾಂತ್ ತೋಮರ್ ಎಂದು ಗುರುತಿಸಲಾಗಿದ್ದು, ಈತನನ್ನು ದೆಹಲಿಯ ಬುರಾರಿ ಪ್ರದೇಶದಲ್ಲಿ ಸೈಬರ್ ಪೊಲೀಸ್ ಘಟಕವು ವಶಕ್ಕೆ ಪಡೆದುಕೊಂಡಿದೆ.
24 ಲಕ್ಷ ರೂ. ಕಳೆದುಕೊಂಡ ಮಹಿಳಾ ಕಾನ್ಸ್ಟೇಬಲ್!
ದೆಹಲಿಯ ಕರೋಲ್ ಬಾಗ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾನಿ ಎಂಬ ಮಹಿಳಾ ಕಾನ್ಸ್ಟೇಬಲ್ ನೀಡಿದ ದೂರಿನ ಆಧಾರದ ಮೇಲೆ ಈ ಬೃಹತ್ ವಂಚನೆ ಜಾಲ ಬೆಳಕಿಗೆ ಬಂದಿದೆ. ಆರೋಪಿ ವಿಕ್ರಾಂತ್, ಶಿವಾನಿ ಅವರಿಗೆ ಬರೋಬ್ಬರಿ ₹24 ಲಕ್ಷ ವಂಚಿಸಿದ್ದಾನೆ. ಶಿವಾನಿ ಅವರು ತಮ್ಮ ಸ್ವಂತ ಉಳಿತಾಯದ ಹಣ ಮಾತ್ರವಲ್ಲದೆ, ₹12 ಲಕ್ಷ ಪರ್ಸನಲ್ ಲೋನ್ ಪಡೆದು ಆರೋಪಿಗೆ ನೀಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಖದೀಮ ವಿಕ್ರಾಂತ್ ವಂಚನೆಯ ಹೈ-ಟೆಕ್ ತಂತ್ರ:
ಬಾಡಿಗೆ ಕಾರು, ರೀಲ್ಸ್ ಹಾವಳಿ: ಆರೋಪಿಯು 8 ಗಂಟೆಗಳ ಅವಧಿಗೆ ದುಬಾರಿ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು, ಅವುಗಳೊಂದಿಗೆ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಶೋ-ಆಫ್ ಮಾಡುತ್ತಿದ್ದನು.
ಡೇಟಿಂಗ್ ಹಾಗೂ ಮದುವೆ ಭರವಸೆ: ಒಂದೇ ಕಾರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಮಹಿಳಾ ಕಾನ್ಸ್ಟೇಬಲ್ಗಳನ್ನು ದುಬಾರಿ ಹೋಟೆಲ್ ಹಾಗೂ ಕಾಫಿ ಡೇಟ್ಗಳಿಗೆ ಕರೆದೊಯ್ದು, ಮದುವೆಯಾಗುವುದಾಗಿ ನಂಬಿಸುತ್ತಿದ್ದನು.
ಆನ್ಲೈನ್ ಬೆಟ್ಟಿಂಗ್ ಹೂಡಿಕೆ: ಉದ್ಯಮ ಹಾಗೂ ಆನ್ಲೈನ್ ಬೆಟ್ಟಿಂಗ್ ಆ್ಯಪ್ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಹಣ ಪೀಕುತ್ತಿದ್ದನು. ಶಿವಾನಿ ಅವರಿಂದ ಪಡೆದ ಹಣದಲ್ಲಿ ₹8 ಲಕ್ಷವನ್ನು ಆರೋಪಿ ‘1x.com’ ಎಂಬ ಬೆಟ್ಟಿಂಗ್ ಆ್ಯಪ್ ಖಾತೆಗೆ ವರ್ಗಾಯಿಸಿರುವುದು ಪತ್ತೆಯಾಗಿದೆ.
ಲಿವ್-ಇನ್ ಪಾರ್ಟ್ನರ್ ಮೂಲವೇ ಟಾರ್ಗೆಟ್!
ಈ ಪ್ರಕರಣದಲ್ಲಿ ಪೊಲೀಸರಿಗೆ ಮತ್ತೊಂದು ಆಘಾತಕಾರಿ ಟ್ವಿಸ್ಟ್ ಸಿಕ್ಕಿದೆ. ಆರೋಪಿ ವಿಕ್ರಾಂತ್ ಜೊತೆ ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದ ಯುವತಿಯೂ ಸಹ ದೆಹಲಿ ಪೊಲೀಸ್ ಇಲಾಖೆಯ ಮಹಿಳಾ ಕಾನ್ಸ್ಟೇಬಲ್! ಆಕೆಯ ಬ್ಯಾಚ್ಮೇಟ್ಗಳ ವಿವರಗಳನ್ನು ಸದುಪಯೋಗಪಡಿಸಿಕೊಂಡ ಆರೋಪಿ, ಒಂದೇ ಬ್ಯಾಚ್ನ ಸುಮಾರು 20ಕ್ಕೂ ಹೆಚ್ಚು ಮಹಿಳಾ ಕಾನ್ಸ್ಟೇಬಲ್ಗಳನ್ನು ಟಾರ್ಗೆಟ್ ಮಾಡಿ ಬಲೆಗೆ ಬೀಳಿಸಿದ್ದನು.
ಪ್ರಸ್ತುತ ದೆಹಲಿ ಸೈಬರ್ ಪೊಲೀಸರು ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದು, ವಂಚನೆಗೊಳಗಾದ ಇತರ ಕಾನ್ಸ್ಟೇಬಲ್ಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.