ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸಾಕಷ್ಟು ಕಾಲಾವಕಾಶ ನೀಡಿದರೂ ಹಲವು ಹೋಂ-ಸ್ಟೇಗಳು ಇನ್ನು ನೋಂದಣಿಯಾಗದಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಅಧಿನಿಯಮ-2015ರ ಅಡಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸುವ ಪ್ರತಿಯೊಬ್ಬರೂ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂ-ಸ್ಟೇಗಳು ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆ. ಈಗಾಗಲೇ ನಿಯಮ ಬಾಹಿರವಾಗಿ ಕಾರ್ಯಾಚರಿಸುತ್ತಿದ್ದ ಹಲವು ಹೋಂ-ಸ್ಟೇಗಳ ಪರವಾನಿಗೆಯನ್ನು ರದ್ದುಗೊಳಿಸಲಾಗಿದ್ದು, ನೋಂದಣಿಯಾಗದ ಘಟಕಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ಪರವಾನಿಗೆ ಪಡೆದಿರುವ ಹೋಂ-ಸ್ಟೇಗಳ ಅವಧಿಯು 5 ವರ್ಷ ಪೂರೈಸುತ್ತಿದ್ದರೆ, ಅಂತಹ ಮಾಲೀಕರು ಕೂಡಲೇ ತಮ್ಮ ಪರವಾನಿಗೆಯನ್ನು ನವೀಕರಿಸಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಅನಧಿಕೃತವಾಗಿ ನಡೆಯುತ್ತಿರುವ ಹೋಂ-ಸ್ಟೇಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಅಥವಾ ದೂರುಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿ ಇರುವವರು ಈ ಕೆಳಗಿನ ವಿಳಾಸ ಅಥವಾ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು:
ಕಚೇರಿ ವಿಳಾಸ: ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ.
ದೂರವಾಣಿ ಸಂಖ್ಯೆ: 08272-200519
ಇ-ಮೇಲ್: ddkodagutourism@gmail.com
ತುರ್ತು ನೆರವು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಂಖ್ಯೆ 112.
ಪಾರದರ್ಶಕ ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಕಟಣೆ ತಿಳಿಸಿದೆ.