ಶಿವಮೊಗ್ಗ/ಹಾವೇರಿ: ಹಿಂದೂ ಪಂಚಾಂಗದ ಅತ್ಯಂತ ಪವಿತ್ರ ಮಾಸಗಳಲ್ಲೊಂದಾದ ‘ಅಧಿಕ ಮಾಸ’ವು (ಪುರುಷೋತ್ತಮ ಮಾಸ) ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರದವರೆಗೆ ನಡೆಯಲಿದೆ. ಈ ಜ್ಯೇಷ್ಠ ಅಧಿಕ ಮಾಸದ ಪವಿತ್ರ ದಿನಗಳಲ್ಲಿ ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಮೂರು ಪ್ರಸಿದ್ಧ ಆಂಜನೇಯ ಸ್ವಾಮಿಗಳ ದರ್ಶನ ಯಾತ್ರೆಗೆ ಭಕ್ತ ವಲಯದಲ್ಲಿ ಭಾರೀ ಮಹತ್ವ ವ್ಯಕ್ತವಾಗಿದೆ.
ಕರ್ನಾಟಕದ ಉತ್ತರ ಭಾಗದಲ್ಲಿರುವ ಅತ್ಯಂತ ಜಾಗೃತ ಕ್ಷೇತ್ರಗಳಾದ ಶಾಂತೇಶ, ಕಾಂತೇಶ ಮತ್ತು ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಅಧಿಕ ಮಾಸ ಅಥವಾ ಶ್ರಾವಣ ಮಾಸದ ಒಂದೇ ದಿನ ಸೂರ್ಯೋದಯದ ನಂತರ ಪ್ರಾರಂಬಿಸಿ, ಸೂರ್ಯಾಸ್ತದ ಒಳಗಾಗಿ ದರ್ಶನ ಪಡೆದರೆ ಕಾಶಿ ತೀರ್ಥಯಾತ್ರೆ ಮಾಡಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಬಲವಾದ ಪ್ರತೀತಿ ಇದೆ.
ಈ ಮೂರೂ ಕ್ಷೇತ್ರಗಳ ಹನುಮಂತನ ವಿಗ್ರಹಗಳಲ್ಲಿ ಅತ್ಯಂತ ಶ್ರೇಷ್ಠವಾದ ಸಾಲಿಗ್ರಾಮಗಳನ್ನು ಸ್ಥಾಪಿಸಲಾಗಿದ್ದು, ದರ್ಶನದ ವೇಳೆ ಈ ಸಾಲಿಗ್ರಾಮಗಳನ್ನು ಕಣ್ತುಂಬಿಕೊಳ್ಳುವುದು ವಿಶೇಷವಾಗಿದೆ.
ಕಾಂತೇಶ (ಕದರಮಂಡಲಗಿ): ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿದೆ. ಈ ವಿಗ್ರಹದ ಕಣ್ಣುಗಳಲ್ಲಿ ಸಾಲಿಗ್ರಾಮವಿದ್ದು, ಅತ್ಯಂತ ಕಾಂತಿಯುತವಾಗಿರುವುದರಿಂದ ‘ಕಾಂತೇಶ’ ಎಂದು ಕರೆಯಲಾಗುತ್ತದೆ. ಇಲ್ಲಿ ದಾಸಶ್ರೇಷ್ಠ ಕನಕದಾಸರು ದೇವರನ್ನು ಆರಾಧಿಸಿದ ಇತಿಹಾಸವಿದೆ.
ಭ್ರಾಂತೇಶ / ಹುಚ್ಚರಾಯ ಸ್ವಾಮಿ (ಶಿಕಾರಿಪುರ): ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿದೆ. ಈ ಮೂರ್ತಿಯ ನೆತ್ತಿಯ (ಶಿರಸ್ಸು) ಮೇಲೆ ಸಾಲಿಗ್ರಾಮವಿದೆ. ಬ್ರಿಟಿಷರು ಮತ್ತು ಮರಾಠರ ವಿರುದ್ಧ ಹೋರಾಡಿದ ವೀರ ದೊಂಡಿಯಾ ವಾಘ್ ತನ್ನ ಖಡ್ಗವನ್ನು ಈ ದೇವರಿಗೆ ಸಮರ್ಪಿಸಿದ್ದ ಇತಿಹಾಸವಿದೆ.
ಶಾಂತೇಶ (ಸಾತೇನಹಳ್ಳಿ): ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿದೆ. ಈ ಮೂರ್ತಿಯ ಪಾದದಲ್ಲಿ ಸಾಲಿಗ್ರಾಮವನ್ನು ಸ್ಥಾಪಿಸಲಾಗಿದೆ.
ಸಹಸ್ರಾರು ವರ್ಷಗಳ ಹಿಂದೆ ದೂರ್ವಾಸ, ವಶಿಷ್ಠ ಮತ್ತು ವ್ಯಾಸ ಮುನಿಗಳು ಈ ಮೂರು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ನಂಬಲಾಗಿದೆ. ಒಂದೇ ದಿನ ಈ ಮೂವರು ದೇವರ ದರ್ಶನ ಪಡೆಯುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುವುದಲ್ಲದೆ, ಶನಿ ಕಾಟದಂತಹ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
ಶಿಕಾರಿಪುರದಿಂದ ಕದರಮಂಡಲಗಿ ಸುಮಾರು 60 ಕಿ.ಮೀ ಮತ್ತು ಸಾತೇನಹಳ್ಳಿ ಸುಮಾರು 35 ಕಿ.ಮೀ ದೂರದಲ್ಲಿದೆ. ಹತ್ತಿರದ ಅಂತರದಲ್ಲಿಯೇ ಇರುವುದರಿಂದ ಭಕ್ತರು ಒಂದೇ ದಿನದಲ್ಲಿ ಅತ್ಯಂತ ಸುಲಭವಾಗಿ ಮೂರೂ ಕ್ಷೇತ್ರಗಳ ದರ್ಶನವನ್ನು ಮುಗಿಸಬಹುದಾಗಿದೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಇಲ್ಲಿಗೆ ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ.
ಚಂದ್ರನ ವರ್ಷ (354 ದಿನ) ಹಾಗೂ ಸೌರ ವರ್ಷದ (365 ದಿನ) ನಡುವಿನ 11 ದಿನಗಳ ವ್ಯತ್ಯಾಸವನ್ನು ಸರಿಹೊಂದಿಸಲು ಪ್ರತಿ ಮೂರು ವರ್ಷಕ್ಕೊಮ್ಮೆ ಈ 13ನೇ ತಿಂಗಳನ್ನು (ಅಧಿಕ ಮಾಸ) ಸೇರಿಸಲಾಗುತ್ತದೆ. ಸೂರ್ಯನು ಒಂದು ತಿಂಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಿಸದಿದ್ದಾಗ, ಅಂದರೆ ಸಂಕ್ರಾಂತಿ ಇಲ್ಲದ ಚಾಂದ್ರಮಾನ ತಿಂಗಳನ್ನು ಅಧಿಕ ಮಾಸವೆಂದು ಪರಿಗಣಿಸಲಾಗುತ್ತದೆ.
ಈ ಮಾಸದ ಅಧಿಪತಿ ಶ್ರೀ ವಿಷ್ಣು (ಪುರುಷೋತ್ತಮ) ಆಗಿರುವುದರಿಂದ ಈ ಸಮಯದಲ್ಲಿ ದಾನ, ಜಪ, ತಪಸ್ಸು, ವಿಷ್ಣು ಸಹಸ್ರನಾಮ ಪಠಣ, ವ್ರತ ಹಾಗೂ ತೀರ್ಥಯಾತ್ರೆಗಳು ಅತ್ಯಂತ ಫಲದಾಯಕವಾಗಿವೆ. ಈ ಮಾಸದಲ್ಲಿ ಮಾಡುವ ಪುಣ್ಯ ಕಾರ್ಯಗಳು ದೀರ್ಘಕಾಲದ ಪಾಪಗಳನ್ನು ನಾಶಪಡಿಸುತ್ತವೆ. ಆದರೆ, ಈ ಪವಿತ್ರ ಮಾಸದಲ್ಲಿ ಮದುವೆ, ಗೃಹಪ್ರವೇಶ, ಮುಂಡನದಂತಹ ಯಾವುದೇ ಶುಭ-ಮಂಗಳಕರ ಕೆಲಸಗಳನ್ನು ಮಾಡಲಾಗುವುದಿಲ್ಲ ಎಂದು ಧರ್ಮಶಾಸ್ತ್ರಗಳು ಹೇಳುತ್ತವೆ.

ವರದಿ: ಕೆ.ಜಿ. ಮಹದೇವಯ್ಯ, BE, Mtech, LLB