ಕೊಯಮತ್ತೂರು: ಪ್ರೀತಿಸಿದ ಯುವಕನ ಕ್ರಿಮಿನಲ್ ಹಿನ್ನೆಲೆ ತಿಳಿದು ಆತನಿಂದ ಅಂತರ ಕಾಯ್ದುಕೊಂಡಿದ್ದ ಯುವತಿಯ ಮನೆ ಮೇಲೆ ಭಗ್ನ ಪ್ರೇಮಿಯೊಬ್ಬ ತನ್ನ ಗ್ಯಾಂಗ್ ಜೊತೆ ಸೇರಿ ಪೆಟ್ರೋಲ್ ಬಾಂಬ್ ಎಸೆದು ಭೀತಿ ಸೃಷ್ಟಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ತೊಂಡಾಮುತ್ತೂರಿನ ಸಿಬಿಸಿ ಗಾರ್ಡನ್ ನಿವಾಸಿ ಸುಂದರಮೂರ್ತಿ ಎಂಬುವವರ ಪುತ್ರಿ ಕಾಲೇಜು ವಿದ್ಯಾಭ್ಯಾಸ ಮಾಡುವಾಗ ಸ್ಥಳೀಯ ನಿವಾಸಿ ಕಾರ್ತಿಕ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ದಿನ ಕಳೆದಂತೆ ಕಾರ್ತಿಕ್ ಸಾಮಾನ್ಯ ಯುವಕನಲ್ಲ, ಆತನ ಮೇಲೆ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 31 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ವಿಷಯ ಯುವತಿಗೆ ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಯುವತಿ, ತಕ್ಷಣವೇ ಆತನಿಂದ ದೂರ ಸರಿದು ಅಂತರ ಕಾಯ್ದುಕೊಂಡಿದ್ದಾಳೆ.
ತನ್ನನ್ನು ನಿರ್ಲಕ್ಷಿಸಿ ದೂರವಾದ ಯುವತಿಯ ನಡೆಗೆ ಕಡುಕೋಪಗೊಂಡ ಕಾರ್ತಿಕ್, ಮತ್ತೆ ಪ್ರೀತಿಸುವಂತೆ ಆಕೆಗೆ ನಿರಂತರವಾಗಿ ಪೀಡಿಸಿ, ಬೆದರಿಕೆ ಹಾಕಲಾರಂಭಿಸಿದ್ದಾನೆ. ಆದರೂ ಯುವತಿ ಮಣಿಯದಿದ್ದಾಗ ಮೇ 24ರ ಸಂಜೆ ತನ್ನ ಸಹಚರರೊಂದಿಗೆ ಮಾರಕಾಸ್ತ್ರಗಳೊಂದಿಗೆ ಸ್ಕೆಚ್ ಹಾಕಿದ್ದಾನೆ. ಎರಡು ಬೈಕ್‌ಗಳಲ್ಲಿ ನಾಲ್ವರು ದುಷ್ಕರ್ಮಿಗಳೊಂದಿಗೆ ಯುವತಿಯ ಮನೆ ಬಳಿ ಬಂದ ಕಾರ್ತಿಕ್, ಸೀಮೆಎಣ್ಣೆ ಮತ್ತು ಮದ್ಯದ ಬಾಟಲಿಗಳಿಗೆ ಬೆಂಕಿ ಹಚ್ಚಿ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಮಾದರಿಯಲ್ಲಿ ಎಸೆದು ದಾಳಿ ನಡೆಸಿದ್ದಾನೆ.
ದಡಬಡಿಸಿ ಬಿದ್ದ ಬಾಂಬ್‌ಗಳಿಂದಾಗಿ ಮನೆಯ ವರಾಂಡದಲ್ಲಿದ್ದ ಸ್ಕೂಟರ್ ಹಾಗೂ ಶೂ ಸ್ಟ್ಯಾಂಡ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಮನೆಯವರು ಬೆಂಕಿ ನಂದಿಸಿದ್ದರಿಂದ ಹಾಗೂ ಅದೃಷ್ಟವಶಾತ್ ಬಾಂಬ್ ಮನೆಯ ಒಳಭಾಗಕ್ಕೆ ಬೀಳದಿದ್ದರಿಂದ ಭಾರಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಈ ಭೀಕರ ಘಟನೆಯ ನಂತರ ಯುವತಿಯ ತಂದೆ ಸುಂದರಮೂರ್ತಿ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮುಖ್ಯ ಆರೋಪಿ ಕಾರ್ತಿಕ್ ಸೇರಿದಂತೆ ಮೂವರು ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಿದ್ದಾರೆ.