Police Roundup

ಪ್ರೀತಿಗಾಗಿ ಲಿಂಗ ಬದಲಿಸಿಕೊಂಡ ಯುವಕ; ದಂಪತಿಗಳಂತೆ ಜೀವಿಸಿ ಕೊನೆಗೆ ವಂಚಿಸಿದ ಪ್ರೇಮಿ ವಿರುದ್ಧ ಪ್ರಕರಣ ದಾಖಲು

Share News

ದೆಹಲಿ/ಗೋಲಾ: “ಪ್ರೀತಿಗಾಗಿ ಏನು ಬೇಕಾದರೂ ಮಾಡಬಹುದು” ಎಂಬ ಮಾತನ್ನು ನಂಬಿ ಯುವಕನೊಬ್ಬ ಲಿಂಗ ಶಸ್ತ್ರಚಿಕಿತ್ಸೆ (Sex Change) ಮಾಡಿಸಿಕೊಂಡು ಯುವತಿಯಾಗಿ ಬದಲಾದ, ಆದರೆ ಕೊನೆಗೆ ಪ್ರೇಮಿಯೇ ಆಕೆಗೆ ವಂಚಿಸಿ ಕೈಕೊಟ್ಟಿರುವ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಿನಲ್ಲಿ ತನ್ನನ್ನು ನಂಬಿಸಿ, ಲಿಂಗ ಬದಲಾವಣೆ ಮಾಡಿಸಿ ಈಗ ತನ್ನ ಜೀವನವನ್ನು ಹಾಳು ಮಾಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸರ ಮೊರೆ ಹೋಗಿದ್ದಾಳೆ.

 

ಒಂದೇ ಪ್ರದೇಶದ ಇಬ್ಬರು ಯುವಕರ ನಡುವೆ ಆರಂಭವಾದ ಸ್ನೇಹ ತದನಂತರ ಗಾಢ ಪ್ರೀತಿಯಾಗಿ ಬದಲಾಗಿತ್ತು. ಇಬ್ಬರೂ ಜೊತೆಯಾಗಿ ಬಾಳಲು ನಿರ್ಧರಿಸಿದಾಗ, ಒಟ್ಟಿಗೆ ಸಂಸಾರ ನಡೆಸುವ ಉದ್ದೇಶದಿಂದ ಪರಸ್ಪರ ಒಪ್ಪಿಗೆಯ ಮೇರೆಗೆ ಒಬ್ಬರು ಲಿಂಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಅದರಂತೆ ಆ ಯುವಕ ವೈದ್ಯಕೀಯ ಶಸ್ತ್ರಚಿಕಿತ್ಸೆ ಹಾಗೂ ಹಾರ್ಮೋನುಗಳ ಚಿಕಿತ್ಸೆಗೆ ಒಳಗಾಗಿ ಯುವತಿಯಾಗಿ ಬದಲಾಗಿದ್ದಾನೆ. ಲಿಂಗ ಬದಲಾವಣೆಯ ನಂತರ ಇಬ್ಬರೂ ದೆಹಲಿಗೆ ತೆರಳಿ, ಸುಮಾರು ಮೂರು ತಿಂಗಳ ಕಾಲ ಪತಿ-ಪತ್ನಿಯಂತೆ ಒಂದೇ ಸೂರಿನಡಿ ವಾಸಿಸುತ್ತಿದ್ದರು.

 

ವೈದ್ಯಕೀಯ ಚಿಕಿತ್ಸೆ ಹಾಗೂ ಹಾರ್ಮೋನುಗಳ ಬದಲಾವಣೆಯ ಪ್ರಕ್ರಿಯೆಯಿಂದಾಗಿ ಆಕೆಯ ಧ್ವನಿ ಮತ್ತು ದೈಹಿಕ ರೂಪ ಸಂಪೂರ್ಣವಾಗಿ ಸ್ತ್ರೀ ರೂಪಕ್ಕೆ ಬದಲಾಗಿದೆ. ಆದರೆ, ಮೂರು ತಿಂಗಳು ಕಳೆಯುತ್ತಿದ್ದಂತೆ ಪ್ರೇಮಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ. ಆಕೆಯ ಮೇಲಿನ ಆಸಕ್ತಿ ಕಳೆದುಕೊಂಡ ಆತ, ದೈಹಿಕ ಹಾಗೂ ಮಾನಸಿಕ ಸಂಬಂಧಗಳನ್ನು ಕಡಿದುಕೊಂಡು ದೂರವಾಗಿದ್ದಾನೆ. ಪ್ರೀತಿಯ ನಾಟಕವಾಡಿ ತನ್ನನ್ನು ಲಿಂಗ ಬದಲಾವಣೆಗೆ ಪ್ರೇರೇಪಿಸಿ, ಈಗ ಇತ್ತ ಯುವಕನೂ ಅಲ್ಲದೆ, ಅತ್ತ ಯುವತಿಯೂ ಆಗದೆ ಮಧ್ಯಂತರ ಸ್ಥಿತಿಯಲ್ಲಿ ತನ್ನ ಜೀವನವನ್ನು ಆತ ಹಾಳು ಮಾಡಿದ್ದಾನೆ ಎಂದು ಸಂತ್ರಸ್ತೆ ಕಣ್ಣೀರಿಟ್ಟಿದ್ದಾಳೆ.

 

ನ್ಯಾಯ ಕೋರಿ ಸಂತ್ರಸ್ತೆ ಹಿರಿಯ ಪೊಲೀಸ್ ಅಧಿಕಾರಿಗಳ (SSP) ಗಮನಕ್ಕೆ ವಿಷಯವನ್ನು ತಂದಿದ್ದಾರೆ. ಕಾನೂನು ತಜ್ಞರ ಸಲಹೆ ಹಾಗೂ ಎಸ್‌ಎಸ್‌ಪಿ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಗೋಲಾ ಪೊಲೀಸ್ ಠಾಣೆಯಲ್ಲಿ ಆರೋಪಿ ಪ್ರೇಮಿಯ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಾನವ ಅಂಗಾಂಗ ಕಸಿ ಕಾಯ್ದೆ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

ಈ ವಿಲಕ್ಷಣ ಪ್ರಕರಣದ ಕುರಿತು ಎಸ್‌ಎಸ್‌ಪಿ ಡಾ. ವಿಪಿನ್ ತಾಡಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಲಿಂಗ ಬದಲಾವಣೆಗೆ ಬಲವಂತಪಡಿಸಿ ವಂಚಿಸಿರುವ ಕುರಿತು ಸಂತ್ರಸ್ತೆಯಿಂದ ಲಿಖಿತ ದೂರು ಬಂದಿದೆ. ದೂರಿನ ಆಧಾರದ ಮೇಲೆ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವೈದ್ಯಕೀಯ ವರದಿಗಳು ಹಾಗೂ ಲಭ್ಯವಿರುವ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ತನಿಖೆ ಪ್ರಗತಿಯಲ್ಲಿದ್ದು, ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

 

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin