Police Roundup

ಸಿನಿಮಾ ಕಥೆಗೂ ಮಿಗಿಲು ಈ ಮರ್ಡರ್ ಮಿಸ್ಟರಿ: 40 ವರ್ಷಗಳ ಬಳಿಕ ಪೊಲೀಸರಿಗೆ ಶರಣಾದ ಹಂತಕ!

Share News

ಕೋಝಿಕ್ಕೋಡ್: ಸಿನಿಮಾ ಕಥೆಗಳನ್ನೂ ಮೀರಿಸುವಂತಹ ವಿಚಿತ್ರ ಮತ್ತು ರೋಚಕ ಘಟನೆಯೊಂದು ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ. ಸುಮಾರು 40 ವರ್ಷಗಳ ಹಿಂದೆ ತಾನು ಮಾಡಿದ ಅವಳಿ ಕೊಲೆಗಳಿಗೆ ಪಶ್ಚಾತ್ತಾಪ ಪಟ್ಟು, ಹಂತಕನೊಬ್ಬ ತಾನಾಗಿಯೇ ಬಂದು ಪೊಲೀಸರ ಮುಂದೆ ಶರಣಾಗುವ ಮೂಲಕ ಹಳೇ ಕೇಸ್‌ಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾನೆ!

​ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಧೂಳು ಹಿಡಿದು ಬಿದ್ದಿದ್ದ ಕೊಲೆ ಪ್ರಕರಣವೊಂದು, ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಕೇವಲ ಒಬ್ಬನ ಅಪರಾಧ ಪ್ರಜ್ಞೆಯಿಂದಾಗಿ (Guilt) ಮತ್ತೆ ಜೀವ ಪಡೆದುಕೊಂಡಿದೆ.

 

ಕೋಝಿಕ್ಕೋಡ್ ಜಿಲ್ಲೆಯ ಕೂಡರಂಜಿ ನಿವಾಸಿಯಾದ ಮೊಹಮ್ಮದಲಿ (55) ಎಂಬಾತ ಕಳೆದ ವರ್ಷ ಅನಿರೀಕ್ಷಿತವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. “ನಾನು 1980ರ ದಶಕದಲ್ಲಿ ಎರಡು ಕೊಲೆಗಳನ್ನು ಮಾಡಿದ್ದೇನೆ, ನನ್ನನ್ನು ಬಂಧಿಸಿ” ಎಂದು ಪೊಲೀಸರ ಮುಂದೆ ನಿಂತಿದ್ದ. ಆರಂಭದಲ್ಲಿ ಇವನ್ಯಾರೋ ಮಾನಸಿಕ ಅಸ್ವಸ್ಥ, ಪಬ್ಲಿಸಿಟಿಗಾಗಿ ಹೀಗೆ ಹೇಳುತ್ತಿದ್ದಾನೆ ಎಂದು ಪೊಲೀಸರು ನಿರ್ಲಕ್ಷಿಸಿದ್ದರು. ಆದರೆ, ಆತ ತನ್ನ ಹೇಳಿಕೆಗೆ ಬದ್ಧನಾಗಿದ್ದರಿಂದ ಪೊಲೀಸರು ಸುದೀರ್ಘ ಒಂದು ವರ್ಷಗಳ ಕಾಲ ಹಳೇ ಫೈಲ್‌ಗಳನ್ನು ಜಾಲಾಡಲು ಆರಂಭಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

 

ಪೊಲೀಸರು ಹಳೇ ದಾಖಲೆಗಳನ್ನು ತನಿಖೆ ನಡೆಸಿದಾಗ 1986ರಲ್ಲಿ ಪ್ರಕಟವಾದ ಪತ್ರಿಕಾ ವರದಿಯೊಂದು ಸಿಕ್ಕಿದೆ. ಅದರಲ್ಲಿ ‘ಕೂಡರಂಜಿ ಮಿಷನ್ ಆಸ್ಪತ್ರೆಯ ಹಿಂಭಾಗದ ಹೊಲದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ’ ಎಂದು ಉಲ್ಲೇಖಿಸಲಾಗಿತ್ತು. ತದನಂತರ ಅದು ಕಣ್ಣೂರು ಜಿಲ್ಲೆಯ ಇರಿಟ್ಟಿ ಮೂಲದ ಮೋಹನನ್ ಎಂಬಾತನ ಶವ ಎಂದು ಗುರುತಿಸಲಾಗಿತ್ತು.

​ಈಗ ಮೊಹಮ್ಮದಲಿ ನೀಡಿರುವ ಹೇಳಿಕೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. 1986ರ ನವೆಂಬರ್‌ನಲ್ಲಿ ಮೋಹನನ್ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದನಂತೆ. ಈ ವೇಳೆ ತನ್ನ ಆತ್ಮರಕ್ಷಣೆಗಾಗಿ ಮೊಹಮ್ಮದಲಿ, ಮೋಹನನ್‌ನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.

 

ಇಷ್ಟಕ್ಕೇ ಈತನ ಪಾಪದ ಪುರಾಣ ಮುಗಿಯುವುದಿಲ್ಲ. 1989ರಲ್ಲಿ ಕೋಝಿಕ್ಕೋಡ್‌ನ ವೆಳ್ಳಯಿಲ್‌ ಬೀಚ್‌ನಲ್ಲಿ ಮತ್ತೊಬ್ಬ ವ್ಯಕ್ತಿಯ ಸಹಾಯದೊಂದಿಗೆ ಇನ್ನೊಂದು ಕೊಲೆ ಮಾಡಿರುವುದಾಗಿಯೂ ಮೊಹಮ್ಮದಲಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

 

ಯಾವುದೇ ಸಾಕ್ಷ್ಯಗಳಿಲ್ಲದೆ ಧೂಳು ಹಿಡಿದಿದ್ದ ಈ ರಹಸ್ಯ ಕೊಲೆ ಪ್ರಕರಣಗಳಿಗೆ ಈಗ ಹಂತಕನೇ ಕ್ಲೈಮ್ಯಾಕ್ಸ್ ಬರೆದಿದ್ದಾನೆ. ಸದ್ಯ ಹಂತಕನ ಸ್ವಯಂಪ್ರೇರಿತ ಒಪ್ಪಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು, ಎರಡನೇ ಕೊಲೆಯ ಹಿಂದಿರುವ ರಹಸ್ಯ ಮತ್ತು ಆತನಿಗೆ ಸಾಥ್ ನೀಡಿದ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

 

ಕಾನೂನಿನ ಕೈ ಉದ್ದ ಇರುತ್ತದೆ” ಎಂಬ ಮಾತು ಈ ಪ್ರಕರಣದಲ್ಲಿ ಸಾಬೀತಾಗಿದೆ. ಆದರೆ ಇಲ್ಲಿ ಕಾನೂನಿನ ಕೈಗಿಂತಲೂ, ಆರೋಪಿಯ ಒಳಮನಸ್ಸಿನ “ಅಪರಾಧ ಪ್ರಜ್ಞೆ” ಆತನನ್ನು 40 ವರ್ಷಗಳ ಕಾಲ ಕಾಡಿ, ಕೊನೆಗೂ ಕಟಕಟೆಯ ಕಡೆಗೆ ಎಳೆದು ತಂದಿದೆ!

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin