ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸವಿರುವ ರಾಜಧಾನಿಯ ಹೈಪ್ರೊಫೈಲ್ ವಲಯ ಸದಾಶಿವನಗರದಲ್ಲಿ ಮಾಟ-ಮಂತ್ರದಂತಹ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಮುಖ್ಯಮಂತ್ರಿಗಳ ನಿವಾಸಕ್ಕೆ ಕೂಗಳತೆಯ ದೂರದಲ್ಲೇ ಈ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸದಾಶಿವನಗರದ ಜಿಬಿಎ ಮೈದಾನದ ಮುಂಭಾಗದ ರಸ್ತೆಯ ಮಧ್ಯೆ ಈ ಘಟನೆ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಗಳು ರಸ್ತೆಯ ಮಧ್ಯದಲ್ಲೇ ದೊಡ್ಡದೊಂದು ವೃತ್ತಾಕಾರವನ್ನು ಹಾಕಿ, ಅಲ್ಲಿ ಕೋಳಿಯನ್ನು ಬಲಿ ಕೊಟ್ಟು, ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ವೃತ್ತ ಬರೆದ ಜಾಗದಲ್ಲೇ ಕೋಳಿಯ ಕಳೇಬರ ಬಿದ್ದಿದ್ದು, ಕತ್ತರಿಸಿದ ಕೋಳಿಯ ತಲೆಯನ್ನು ಬೀದಿನಾಯಿಯೊಂದು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಯಾರೋ ದುಷ್ಕರ್ಮಿಗಳು ಮಧ್ಯರಾತ್ರಿ ಅಥವಾ ಮುಂಜಾನೆ ವೇಳೆ ಯಾರಿಗೂ ತಿಳಿಯದಂತೆ ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ವಿವಿಐಪಿಗಳು ವಾಸಿಸುವ, ಸದಾ ಪೊಲೀಸ್ ಭದ್ರತೆ ಇರುವ ಇಂತಹ ಹೈಪ್ರೊಫೈಲ್ ಪ್ರದೇಶದಲ್ಲೇ ಇಂತಹದ್ದೊಂದು ಅನಿಷ್ಟ ಪದ್ಧತಿಯ ಆಚರಣೆ ನಡೆದಿರುವುದು ಸಾರ್ವಜನಿಕರಲ್ಲಿ, ವಿಶೇಷವಾಗಿ ಪೋಷಕರು ಮತ್ತು ಮಕ್ಕಳಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಇಷ್ಟೊಂದು ಕಟ್ಟುನಿಟ್ಟಿನ ಭದ್ರತೆ ಇರುವ ಸಿಎಂ ನಿವಾಸದ ಹಿಂಭಾಗದ ರಸ್ತೆಯಲ್ಲೇ ಈ ಘಟನೆ ನಡೆದಿರುವುದು ಪೊಲೀಸರ ಗಸ್ತಿನ ಬಗ್ಗೆಯೂ ಸಾರ್ವಜನಿಕರು ಪ್ರಶ್ನೆ ಮಾಡುವಂತೆ ಮಾಡಿದೆ.
ಸದ್ಯ ರಸ್ತೆ ಮಧ್ಯೆ ಬಿದ್ದಿರುವ ಕೋಳಿ ಮತ್ತು ನಿಂಬೆಹಣ್ಣುಗಳನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ವಾಮಾಚಾರದ ಭಯದಿಂದಾಗಿ ಸಾರ್ವಜನಿಕರು ಆ ರಸ್ತೆಯಲ್ಲಿ ಓಡಾಡಲು ತೀವ್ರ ಹಿಂಜರಿಯುತ್ತಿದ್ದು, ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ನಿವಾಸಿಗಳು ಈ ಬಗ್ಗೆ ತೀವ್ರ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸಿದ್ದು, ಪೊಲೀಸರು ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.