Police Roundup

ಹಾಸನದಲ್ಲಿ ಗ್ಯಾಂಗ್ ವಾರ್: ಕೋರ್ಟ್ ರಸ್ತೆಯಲ್ಲೇ ಬೆಂಗಳೂರಿನ ರೌಡಿ ಶೀಟರ್ ಮಂಜೇಶ್ ಭೀಕರ ಕೊಲೆ; ಹಳೇ ದ್ವೇಷಕ್ಕೆ ಪರಮಿ ಗ್ಯಾಂಗ್ ಸ್ಕೆಚ್!

Share News

ಹಾಸನ: ದಕ್ಷಿಣ ಬೆಂಗಳೂರಿನ ಭೂಗತ ವಲಯದಲ್ಲಿ ಕಳೆದ ಹದಿನೈದು ವರ್ಷಗಳಿಂದ ಸದ್ದು ಮಾಡ್ತಿದ್ದ ರೌಡಿಗಳ ಹಳೇ ವೈಷಮ್ಯ ಈಗ ಹಾಸನದಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ಆವಲಳ್ಳಿ ಮಂಜೇಶ್ (ಮಂಜ) ಎಂಬಾತನನ್ನು ಆತನ ಬದ್ಧ ವೈರಿ ಕೆಂಬತ್ತಳ್ಳಿ ಪರಮೇಶ್ ಅಲಿಯಾಸ್ ಪರಮಿ ಗ್ಯಾಂಗ್ ತಡರಾತ್ರಿ ಹಾಸನದ ಕೋರ್ಟ್ ರಸ್ತೆಯಲ್ಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದೆ.

 

ಇತ್ತೀಚೆಗಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಶೀಟರ್ ಮಂಜೇಶ್, ಹಾಸನದ ಚನ್ನಪಟ್ಟಣ ನಗರದಲ್ಲಿರುವ ತನ್ನ ತಾಯಿ/ಅಜ್ಜಿ ಮನೆಗೆ ಬಂದಿದ್ದನು. ತಡರಾತ್ರಿ ವೇಳೆ ಮಂಜೇಶ್ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಹೊರಟಿದ್ದಾಗ, ಕಾರುಗಳಲ್ಲಿ ಹೊಂಚು ಹಾಕಿ ಹಿಂಬಾಲಿಸಿಕೊಂಡು ಬಂದಿದ್ದ ರೌಡಿ ಪರಮಿ ಗ್ಯಾಂಗ್, ಹಾಸನ ಜಿಲ್ಲಾ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲೇ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಮುಖದ ಗುರುತು ಸಿಗದಂತೆ ತಲೆ, ಹೊಟ್ಟೆ ಹಾಗೂ ಸೊಂಟದ ಭಾಗಕ್ಕೆ ಮನಬಂದಂತೆ ಕೊಚ್ಚಲಾಗಿದ್ದು, ಮೃತನ ಬಲಗೈಯನ್ನು ಕತ್ತರಿಸಿ ವಿಕೃತವಾಗಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

 

ಕೊಲೆಯಾದ ಆವಲಳ್ಳಿ ಮಂಜೇಶ್ ಹಾಗೂ ಕೆಂಬತ್ತಳ್ಳಿ ಪರಮೇಶ್ ಇಬ್ಬರೂ ಒಂದೇ ಠಾಣೆಯ ರೌಡಿ ಪಟ್ಟಿಯಲ್ಲಿದ್ದವರು. ಅಕ್ಕಪಕ್ಕದ ಊರಿನವರಾದ ಇವರು ಆರಂಭದಲ್ಲಿ ಸ್ನೇಹಿತರಾಗಿದ್ದರೂ, ದಕ್ಷಿಣ ಬೆಂಗಳೂರಿನ ಅಂಡರ್‌ವರ್ಲ್ಡ್ ವರ್ಚಸ್ಸಿಗಾಗಿ ಇವರ ನಡುವೆ ಬಿರುಕು ಮೂಡಿತ್ತು. ಬೆಂಗಳೂರು ದಕ್ಷಿಣ ತಾಲೂಕಿನ ಅಂಜನಾಪುರದ ಪಾಲಿಕೆ ಮಾಜಿ ಸದಸ್ಯ ಸೋಮಣ್ಣ ಅವರ ಅಣ್ಣನ ಮಗ ವಿನೋದ್ ಕೊಲೆ ಪ್ರಕರಣದಲ್ಲಿ ಮಂಜೇಶ್ ಜೈಲು ಸೇರಿದ್ದನು.

 

​ಇದಕ್ಕೆ ಪ್ರತಿಕಾರವಾಗಿ ಪರಮಿ ಗ್ಯಾಂಗ್, ಇದೇ ಕೇಸಿನಲ್ಲಿದ್ದ ಟಿಕ್‌ಟಾಕ್ ಸ್ಟಾರ್ ನವೀನ್ ಎಂಬಾತನನ್ನು ಮೈಸೂರಿನ ಅರಮನೆ ಗೇಟ್ ಮುಂಭಾಗದಿಂದಲೇ ಅಪಹರಿಸಿ, ಕೊಲೆ ಮಾಡಿ ನಾಲೆಯೊಂದಕ್ಕೆ ಎಸೆದಿತ್ತು. ಅಂದಿನಿಂದ ಇಬ್ಬರ ನಡುವೆ “ನೀನಾ-ನಾನಾ” ಎಂಬ ಗ್ಯಾಂಗ್ ವಾರ್ ಆರಂಭವಾಗಿ, ಎರಡು ಗ್ಯಾಂಗ್‌ಗಳಿಂದ ಕನಿಷ್ಠ ಐದೈದು ಜನ ಸರಣಿ ಕೊಲೆಗಳಿಗೆ ಬಲಿಯಾಗಿದ್ದರು. ಮೈಸೂರು ಜೈಲಿನಿಂದ ಇತ್ತೀಚೆಗಷ್ಟೇ ಪರಮಿ ರಿಲೀಸ್ ಆಗಿದ್ದರೆ, ಮಂಜೇಶ್ ಬೆಂಗಳೂರು ಜೈಲಿನಿಂದ ಹೊರಬಂದು ಇಬ್ಬರೂ ಪರಸ್ಪರ ಸ್ಕೆಚ್ ಹಾಕುತ್ತಿದ್ದರು ಎನ್ನಲಾಗಿದೆ.

 

ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಜಿಲ್ಲಾ ನಿಸ್ತಂತು ಕೊಠಡಿ (Control Room) ಮೂಲಕ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಬಳಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ಮೃತನ ಗುರುತು ಪತ್ತೆಯಾಗಿದೆ. ಈ ಕೊಲೆಯ ಹಿಂದೆ ತಲಘಟ್ಟಪುರ ರೌಡಿ ಶೀಟರ್ ಕೆಂಬತ್ತಳ್ಳಿ ಪರ್ಮಿ, ಕರಿಯ ಪುನಿತ, ಶಶಿ, ಭರತ್, ಜಯಂತ್, ಆಕಾಶ್, ವಿಕಾಸ್, ಸಾಯಿ ಕುಮಾರ್, ಲಿಂಗ, ರಾಕೇಶ್ ಹಾಗೂ ಆದಿತ್ಯ ಎಂಬುವವರು ಇರುವ ಶಂಕೆ ವ್ಯಕ್ತವಾಗಿದೆ.

 

ಜನನಿಬಿಡ ಕೋರ್ಟ್ ರಸ್ತೆಯಲ್ಲೇ ನಡೆದಿರುವ ಈ ಭೀಕರ ಹತ್ಯೆಯಿಂದಾಗಿ ಹಾಸನ ನಗರದ ಜನತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಬೆಂಗಳೂರು ಮೂಲದ ರೌಡಿಗಳ ಬಂಧನಕ್ಕಾಗಿ ಹಾಸನ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin