Police Roundup

ಗೆಳೆತನದ ಹೆಸರಲ್ಲಿ ನಂಬಿಕೆ ದ್ರೋಹ: ₹8 ಲಕ್ಷ ವಂಚಿಸಿ ಹಾವೇರಿ ಮೂಲದ ಕಿಲಾಡಿ ಸಮಲ್ ರಾಜ್ ರಾತ್ರೋರಾತ್ರಿ ಪರಾರಿ!

Share News

ಜನರ ಮುಗ್ಧತೆ ಹಾಗೂ ಸ್ನೇಹವನ್ನೇ ಬಂಡವಾಳ ಮಾಡಿಕೊಂಡು, ನಂಬಿದ ಗೆಳೆಯನಿಗೇ ಲಕ್ಷಾಂತರ ರೂಪಾಯಿ ನಾಮ ಹಾಕಿ ರಾತ್ರೋರಾತ್ರಿ ಮನೆ ಖಾಲಿ ಮಾಡಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಿವಾಸಿಯಾದ ಸಮಲ್ ರಾಜ್ (ಶ್ಯಾಮಲ ರಾಜ) ಎಂಬಾತನೇ ಈ ವಂಚನೆ ಎಸಗಿ ತಲೆಮರೆಸಿಕೊಂಡಿರುವ ಕಿಲಾಡಿ ವಂಚಕ.

 

ಆರೋಪಿ ಸಮಲ್ ರಾಜ್‌ನ ವಂಚನೆಯ ಜಾಲ ಅತ್ಯಂತ ವ್ಯವಸ್ಥಿತವಾಗಿದೆ. ಮೇಲ್ನೋಟಕ್ಕೆ ಶ್ರೀಮಂತರ ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ಆತ್ಮೀಯ ಸ್ನೇಹ ಬೆಳೆಸುವ ಈತ, ತಾನು ಅತ್ಯಂತ ಪ್ರಾಮಾಣಿಕ ಮತ್ತು ದೊಡ್ಡ ‘ಸಾಚಾ’ ಎನ್ನುವಂತೆ ಬಿಂಬಿಸಿಕೊಳ್ಳುತ್ತಾನೆ. ಗೆಳೆಯರ ಸಂಪೂರ್ಣ ನಂಬಿಕೆ ಗಳಿಸಿದ ನಂತರ ತನ್ನ ಅಸಲಿ ಕಪಟ ನಾಟಕವನ್ನು ಆರಂಭಿಸುತ್ತಾನೆ. “ಮದುವೆ ನಿಶ್ಚಯವಾಗಿದೆ”, “ಸ್ವಂತ ಮನೆ ಕಟ್ಟಬೇಕು”, “ತುರ್ತು ಹಣದ ಅವಶ್ಯಕತೆ ಇದೆ” ಎಂದು ಕಟ್ಟುಕಥೆ ಕಟ್ಟಿ, ಅತ್ಯಂತ ದೈನೇಸಿ ಸ್ಥಿತಿಯಲ್ಲಿ ನಟಿಸಿ ಗೆಳೆಯರಿಂದ ಅನುಕಂಪ (ಸಿಂಪತಿ) ಗಿಟ್ಟಿಸಿಕೊಳ್ಳುತ್ತಾನೆ. ಇದನ್ನು ನಂಬಿ ಸ್ನೇಹಿತರು ನೀಡುವ ಲಕ್ಷಾಂತರ ರೂಪಾಯಿ ಸಾಲವನ್ನು ಪಡೆದು, ಅಂತಿಮವಾಗಿ ಮೊಬೈಲ್ ನಂಬರ್ ಬ್ಲಾಕ್ ಮಾಡಿ, ಇದ್ದಕ್ಕಿದ್ದಂತೆ ನಾಪತ್ತೆಯಾಗುವುದು ಈತನ ಹಳೇ ಚಾಳಿಯಾಗಿದೆ.

 

ಇತ್ತೀಚೆಗೆ ಈತನ ನಯವಂಚಕ ಮಾತುಗಳಿಗೆ ಅಮಾಯಕ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಆರೋಪಿಯು ತನ್ನ ಕಪಟ ಮಾತುಗಳಿಂದ ಆ ವ್ಯಕ್ತಿಯ ನಂಬಿಕೆ ಗಳಿಸಿ, ಹಂತ ಹಂತವಾಗಿ ಸುಮಾರು 8 ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ. ಹಣ ಕೈ ಸೇರಿದ ತಕ್ಷಣವೇ ತನ್ನ ಅಸಲಿ ಬುದ್ಧಿ ತೋರಿಸಿರುವ ಸಮಲ್ ರಾಜ್, ಸದ್ಯ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ತಾನು ವಾಸವಿದ್ದ ಬಾಡಿಗೆ ಮನೆ ಖಾಲಿ ಮಾಡಿ ರಾತ್ರೋರಾತ್ರಿ ಪರಾರಿಯಾಗಿದ್ದಾನೆ. ನಂಬಿ ಹಣ ನೀಡಿದ ವ್ಯಕ್ತಿ ಈಗ ಹಣವೂ ಸಿಗದೆ, ಗೆಳೆಯನೂ ಇಲ್ಲದೆ ಕಣ್ಣೀರಿಡುವಂತಾಗಿದೆ.

 

ಮುಂದಿನ ದಿನಗಳಲ್ಲಿ ಈತ ಬೇರೆ ಜಿಲ್ಲೆ ಅಥವಾ ಊರುಗಳಲ್ಲಿ ಹೊಸ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಇದೇ ರೀತಿ ವಂಚಿಸುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ, ಸಾರ್ವಜನಿಕರು ಚಿತ್ರದಲ್ಲಿರುವ ವ್ಯಕ್ತಿಯನ್ನು ಎಲ್ಲೇ ಗುರುತಿಸಿದರೂ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.

​ವಿಶೇಷ ಸೂಚನೆ: ಈ ನಯವಂಚಕನನ್ನು ಪತ್ತೆ ಹಚ್ಚಲು ಸಹಕರಿಸಿ, ಸೂಕ್ತ ಮಾಹಿತಿ ನೀಡಿದವರಿಗೆ “ಸೂಕ್ತ ನಗದು ಬಹುಮಾನ” ನೀಡಲಾಗುವುದು ಎಂದು ಸಂತ್ರಸ್ತರು ತಿಳಿಸಿದ್ದಾರೆ. ಸಾರ್ವಜನಿಕರು ಈ ಕಿಲಾಡಿಯನ್ನು ಪತ್ತೆ ಹಚ್ಚಿ, ಮೋಸ ಹೋದ ವ್ಯಕ್ತಿಗೆ ನ್ಯಾಯ ಕೊಡಿಸಲು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

​ಸಾರ್ವಜನಿಕರಲ್ಲಿ ಮನವಿ: ಇಂತಹ ವ್ಯಕ್ತಿಗಳ ನಯವಾದ ಹಾಗೂ ಸಿಹಿ ಮಾತುಗಳಿಗೆ ಯಾರೂ ಮರುಳಾಗಬೇಡಿ. ಯಾವುದೇ ರೀತಿಯ ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದ ಇರುವುದು ಒಳಿತು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin