ಮಂಗಳೂರು: ನಗರದ ಜೋಕಟ್ಟೆಯಲ್ಲಿ ನಡೆದಿದ್ದ ಯುವಕನೋರ್ವನ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆಗೈದ ಪ್ರಕರಣವನ್ನು ಭೇದಿಸುವಲ್ಲಿ ಪಣಂಬೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸೇರಿದಂತೆ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು:
ಪ್ರಶಾಂತ್ ಕುಮಾರ್ (೩೬), ನಿವಾಸಿ: ಶಿವಾಜಿ ನಗರ, ದರ್ಬಾಂಗಾ ಜಿಲ್ಲೆ, ಬಿಹಾರ (ಎಂಆರ್‌ಪಿಎಲ್‌ನಲ್ಲಿ ವೆಲ್ಡರ್).
ಪಿಂಕೂ ಮಹ್ತೋ (೩೩), ನಿವಾಸಿ: ಧರಮ್‌ಪುರ್ ಟಿಕಹಾ ಗ್ರಾಮ, ವೈಶಾಲಿ ಜಿಲ್ಲೆ, ಬಿಹಾರ (ಬಾರ್ ಬೆಂಡಿಂಗ್ ಕಾರ್ಮಿಕ).
ಮೃತಪಟ್ಟ ಯುವಕ: ಚಂದನ್ ಚೌಹಾನ್ (೩೯), ನಿವಾಸಿ: ಚಾಕ್ ಗರ್ಬಬನೈಲಿ, ಪೂರ್ನಿಯ ಜಿಲ್ಲೆ, ಬಿಹಾರ.
ಬಂಧಿತ ಆರೋಪಿಗಳು ಹಾಗೂ ಮೃತ ಯುವಕ ಬಿಹಾರ ಮೂಲದವರಾಗಿದ್ದು, ಮಂಗಳೂರಿನ ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್‌ನ ಪತ್ನಿಯು ಕಳೆದ ಏಪ್ರಿಲ್ ತಿಂಗಳಿನಲ್ಲಿ ಇನ್ನೋರ್ವ ಯುವಕನೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಳು. ಆಕೆ ಮನೆ ಬಿಟ್ಟು ಹೋಗಲು ಮೃತ ಚಂದನ್ ಚೌಹಾನ್ ಸಂಪೂರ್ಣವಾಗಿ ಸಹಕರಿಸಿದ್ದ ಎನ್ನಲಾಗಿದೆ. ಇದಲ್ಲದೆ, ಪ್ರಶಾಂತ್ ಕುಮಾರ್ ಅಪಘಾತಕ್ಕೀಡಾಗಿ ಮನೆಯಲ್ಲಿದ್ದ ಸಂದರ್ಭವನ್ನು ಬಳಸಿಕೊಂಡು, ಆತನ ಪತ್ನಿ ಸಣ್ಣ ಹುಡುಗನೊಂದಿಗೆ ಓಡಿಹೋಗಿದ್ದಾಳೆ ಎಂದು ಚಂದನ್ ಸಾರ್ವಜನಿಕವಾಗಿ ಅಪಪ್ರಚಾರ ಮಾಡಿದ್ದನು. ಇದರಿಂದ ತೀವ್ರವಾಗಿ ಆಕ್ರೋಶಗೊಂಡಿದ್ದ ಪ್ರಶಾಂತ್ ಕುಮಾರ್, ಚಂದನ್‌ನನ್ನು ಮುಗಿಸಲು ಸಂಚು ರೂಪಿಸಿದ್ದನು.
ಜೂನ್ ೯ರಂದು ಸಂಜೆ ಸುಮಾರು ೬ ಗಂಟೆಗೆ ಆರೋಪಿ ಪ್ರಶಾಂತ್ ಕುಮಾರ್ ತನ್ನ ಸ್ನೇಹಿತ ಪಿಂಕೂ ಮಹ್ತೋನೊಂದಿಗೆ ಸೇರಿ ಚಂದನ್‌ನನ್ನು ತಡೆದು, ದೊಣ್ಣೆಯಿಂದ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಹೊಡೆದಿದ್ದಾನೆ. ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಜೋಕಟ್ಟೆಯ ಬಾಡಿಗೆ ಮನೆಯ ಪಕ್ಕದಲ್ಲೇ ಇದ್ದ ಎಂಎಸ್‌ಇಝಡ್ (MSEZ) ನೀರು ಹರಿಯುವ ತೋಡಿನಲ್ಲಿ ಎಸೆದು ಪರಾರಿಯಾಗಿದ್ದರು. ಜೂನ್ ೧೦ರಂದು ಬೆಳಿಗ್ಗೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
ಘಟನೆಗೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: ೮೨/೨೦೨೬, ಕಲಂ: ೧೦೩ (೧) ಬಿ.ಎನ್.ಎಸ್ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್‌ನನ್ನು ಜೂನ್ ೧೩ರ ತಡರಾತ್ರಿ ೧:೩೦ರ ಸುಮಾರಿಗೆ ಗೋವಾ ರಾಜ್ಯದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೋರ್ವ ಆರೋಪಿ ಪಿಂಕೂ ಮಹ್ತೋನನ್ನು ಜೂನ್ ೧೩ರ ಬೆಳಿಗ್ಗೆ ೧೧:೩೦ಕ್ಕೆ ಜೋಕಟ್ಟೆಯ ವಿಜಯ ವಿಠಲ ಭಜನಾ ಮಂದಿರದ ಬಳಿ ದಸ್ತಗಿರಿ ಮಾಡಲಾಗಿದೆ. ಸದ್ಯ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.