Police Roundup

ಬೆಂಗಳೂರು: ಸಿಸಿಬಿ ಭರ್ಜರಿ ಕಾರ್ಯಾಚರಣೆ; ಉಗಾಂಡಾ ಮೂಲದ ಮಹಿಳೆ ಸೇರಿ ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ, ₹70.50 ಲಕ್ಷ ಮೌಲ್ಯದ ಕೊಕೇನ್ ಜಪ್ತಿ!

Share News

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಸುಮಾರು 70 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ 130 ಗ್ರಾಂ ತೂಕದ ಉನ್ನತ ದರ್ಜೆಯ ಕೊಕೇನ್ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ.

​ಪ್ರಕರಣಕ್ಕೆ ಸಂಬಂಧಿಸಿದಂತೆ ಉಗಾಂಡಾ ಮೂಲದ ಜನತ್ ಎಂಬ ಮಹಿಳಾ ಡ್ರಗ್ ಪೆಡ್ಲರ್ ಹಾಗೂ ಆಕೆಯಿಂದ ಡ್ರಗ್ಸ್ ಪಡೆದುಕೊಳ್ಳುತ್ತಿದ್ದ ವಾಹಬ್ ಎಲ್ವಿಸ್ ಯುನಿಸ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 

ಬೆಂಗಳೂರಿನ ಚಿಕ್ಕಬಾಣವರ ಪ್ರದೇಶದಲ್ಲಿ ಈ ಇಬ್ಬರು ಆರೋಪಿಗಳು ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳ ಪೈಕಿ ವಾಹಬ್ ಎಂಬಾತ ಯಶವಂತಪುರ ಹಾಗೂ ಗೊರಗುಂಟೆಪಾಳ್ಯ ಸುತ್ತಮುತ್ತಲಿನ ಗ್ರಾಹಕರಿಗೆ ಮತ್ತು ಯುವಕರಿಗೆ ನೆಟ್‌ವರ್ಕ್ ಮಾಡಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಕಳವಳಕಾರಿ ಸಂಗತಿಯೊಂದು ಬಯಲಾಗಿದ್ದು, ಉಗಾಂಡಾ ಮೂಲದ ಪ್ರಮುಖ ಆರೋಪಿ ಜನತ್ ಎಂಬಾಕೆ ಭಾರತಕ್ಕೆ ಬ್ಯುಸಿನೆಸ್ ವೀಸಾದಡಿ ಆಗಮಿಸಿ, ಇಲ್ಲಿ ಅಕ್ರಮವಾಗಿ ಡ್ರಗ್ ಪೆಡ್ಲಿಂಗ್ ದಂಧೆ ನಡೆಸುತ್ತಿದ್ದಳು. ಇಷ್ಟೇ ಅಲ್ಲದೆ, ಈಕೆ ಈ ಹಿಂದೆ ದೆಹಲಿಯಲ್ಲೂ ಸಹ ಭಾರಿ ಪ್ರಮಾಣದ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು, ಐದು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದರೂ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದಾಳೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

 

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ರಾಜೇಶ್ ಎಲ್.ವೈ. ಅವರ ನೇತೃತ್ವದ ತಂಡ ಅತ್ಯಂತ ಚಾಣಾಕ್ಷತನದಿಂದ ಈ ಕಾರ್ಯಾಚರಣೆ ನಡೆಸಿದೆ. ಸದ್ಯ ಆರೋಪಿಗಳಿಂದ ಕೊಕೇನ್ ವಶಪಡಿಸಿಕೊಂಡಿರುವ ಅಧಿಕಾರಿಗಳು, ಈ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಹಿಂದೆ ಬೆಂಗಳೂರಿನಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಮತ್ತು ಇವರಿಗೆ ಡ್ರಗ್ಸ್ ಎಲ್ಲಿಂದ ಪೂರೈಕೆಯಾಗುತ್ತಿತ್ತು ಎಂಬ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin