ದೋಡಾ (ಜಮ್ಮು ಮತ್ತು ಕಾಶ್ಮೀರ): ಜಾತ್ರೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಯುವತಿಯೊಬ್ಬಳು ಸೇತುವೆ ಬಳಿ ನಿಗೂಢ ರೀತಿಯಲ್ಲಿ ಚೆನಾಬ್ ನದಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಪ್ರೇಮ್ ನಗರದಲ್ಲಿ ನಡೆದಿದೆ.
ಪಾಯಲ್ ದೇವಿ ನಾಪತ್ತೆಯಾದ ಯುವತಿ. ಈ ಘಟನೆಯ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ವಿವರ:
ಜಾತ್ರೆಗೆ ತೆರಳಿದ್ದ ಪಾಯಲ್ ದೇವಿ, ವಾಪಸ್ ಮನೆಗೆ ಬರಲು ಪರಿಚಿತ ವ್ಯಕ್ತಿಯೊಬ್ಬರ ದ್ವಿಚಕ್ರವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಪ್ರೇಮ್ ನಗರದ ಸೇತುವೆ ಬಳಿ ಬಂದಾಗ ಯುವತಿ ತೀವ್ರ ಆತಂಕಗೊಂಡಿದ್ದನ್ನು ಕಂಡ ಜೊತೆಯಲ್ಲಿದ್ದ ವ್ಯಕ್ತಿ ಹಾಗೂ ಸ್ಥಳೀಯರು ಆಕೆಯನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಅಲ್ಲದೆ, ತಕ್ಷಣವೇ ಆಕೆಯ ತಂದೆಗೂ ಕರೆ ಮಾಡಿ ವಿಷಯ ತಿಳಿಸಲಾಗಿತ್ತು.
ಆದರೆ, ಕೆಲವೇ ಕ್ಷಣಗಳಲ್ಲಿ ಯುವತಿ ನದಿಯಲ್ಲಿ ನಾಪತ್ತೆಯಾಗಿದ್ದಾಳೆ. ಘಟನೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಶೋಧ ಕಾರ್ಯ ತೀವ್ರ:
ನಾಪತ್ತೆಯಾಗಿರುವ ಯುವತಿಯ ಪತ್ತೆಗಾಗಿ ರಾಜ್ಯ ವಿಪತ್ತು ಶಮನ ಪಡೆ (SDRF) ಸಿಬ್ಬಂದಿ ಹಾಗೂ ಸ್ಥಳೀಯರು ಚೆನಾಬ್ ನದಿಯಲ್ಲಿ ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.