ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಜಮೀನುಗಳಿಗೆ ಕಾಡುಪ್ರಾಣಿಗಳು ಲಗ್ಗೆ ಇಡುವುದು ಮುಂದುವರಿದಿದ್ದು, ತಾಲೂಕಿನ ಮಳಲಿ ಗ್ರಾಮದಲ್ಲಿ ಕಾಡುಹಂದಿ ಹಾಗೂ ಜಿಂಕೆಗಳ ಹಿಂಡು ರಾತ್ರೋರಾತ್ರಿ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ.
ಹೆಗ್ಗಡದೇವನಕೋಟೆ ತಾಲೂಕಿನ ಮಳಲಿ ಗ್ರಾಮದ ನಿವಾಸಿ, ಶ್ರಮಜೀವಿ ರೈತ ಲೋಕೇಶ್ ಎಂಬುವವರಿಗೆ ಸೇರಿದ 3 ಎಕರೆ ಜಮೀನಿನಲ್ಲಿ ಈ ಘೋರ ಘಟನೆ ಸಂಭವಿಸಿದೆ. ಪ್ರಸ್ತುತ ಮಳೆ ಅಭಾವದ ತೀವ್ರ ಸಂಕಷ್ಟದ ನಡುವೆಯೂ ರೈತ ಲೋಕೇಶ್ ಅವರು ಸಾಲಸೋಲ ಮಾಡಿ, ಅತ್ಯಂತ ಕಷ್ಟಪಟ್ಟು ಬಾಳೆ ಬೆಳೆಯನ್ನು ಸಾಕಿ ಬೆಳೆಸಿದ್ದರು.
ತಡರಾತ್ರಿ ಆಹಾರ ಅರಸುತ್ತಾ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದ ದಮ್ಮನಕಟ್ಟೆ ಅರಣ್ಯ ಪ್ರದೇಶದಿಂದ ಹೊರಬಂದ ಕಾಡುಹಂದಿಗಳು ಮತ್ತು ಜಿಂಕೆಗಳ ಹಿಂಡು, ಲೋಕೇಶ್ ಅವರ ಜಮೀನಿಗೆ ನುಗ್ಗಿವೆ. ಇಡೀ ಜಮೀನಿನಲ್ಲಿ ಮನಸೋಇಚ್ಛೆ ತೋಟವನ್ನು ಅಗೆದಿರುವ ಕಾಡುಹಂದಿಗಳು, ಫಸಲಿಗೆ ಬರುತ್ತಿದ್ದ ನೂರಾರು ಬಾಳೆ ಗಿಡಗಳನ್ನು ಬೇರು ಸಮೇತ ಕಿತ್ತೆಸೆದು ಉಡೀಸ್ ಮಾಡಿವೆ. ಬೆಳಗ್ಗೆ ಜಮೀನಿಗೆ ಬಂದು ನೋಡಿದ ರೈತನಿಗೆ ಆಘಾತ ಕಾದಿದ್ದು, ಕಣ್ಣೆದುರೇ ಕಷ್ಟಪಟ್ಟು ಬೆಳೆಸಿದ ಫಸಲು ನೆಲಸಮವಾಗಿರುವುದನ್ನು ಕಂಡು ಕಣ್ಣೀರು ಹಾಕಿದ್ದಾರೆ.
ಕಾಡಂಚಿನ ಗ್ರಾಮಗಳಲ್ಲಿ ವನ್ಯಮೃಗಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ರೈತರು ಕೃಷಿ ಮಾಡುವುದೇ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಳಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸೋಲಾರ್ ಮೆಷ್ ಅಳವಡಿಕೆ: ಕಾಡುಪ್ರಾಣಿಗಳು ಜನವಸತಿ ಹಾಗೂ ಕೃಷಿ ಭೂಮಿಗೆ ನುಗ್ಗದಂತೆ ಅರಣ್ಯದ ಗಡಿಯಲ್ಲಿ ಗಟ್ಟಿಮುಟ್ಟಾದ ಮೆಷ್ (ತಂತಿ ಬೇಲಿ) ಹಾಗೂ ಸೌರಶಕ್ತಿ ಬೇಲಿಯನ್ನು ಅಳವಡಿಸಬೇಕು.
ಬೆಳೆ ನಷ್ಟ ಪರಿಹಾರ: ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತ ಲೋಕೇಶ್ ಅವರಿಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ತಕ್ಷಣವೇ ಸೂಕ್ತ ಬೆಳೆ ನಷ್ಟ ಪರಿಹಾರ ವಿತರಿಸಬೇಕು.
ಸಾಲದ ಸುಳಿಗೆ ಸಿಲುಕಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವ ರೈತ ಕುಟುಂಬಕ್ಕೆ ಸರ್ಕಾರ ಆಸರೆಯಾಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.