ಮೈಸೂರು: ಯುವಕನೊಬ್ಬನ ನಿರಂತರ ಬ್ಲ್ಯಾಕ್‌ಮೇಲ್ ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಮನಕಲಕುವ ಘಟನೆ ಮೈಸೂರು ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳಾದ ರಕ್ಷಿತಾ, ಆಕೆಯ ತಾಯಿ ನಾಗರತ್ನ ಹಾಗೂ ತಂದೆ ಶಿವಣ್ಣ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಸಾವಿಗೂ ಮುನ್ನ ಮೂವರೂ ಸೇರಿ ತಮ್ಮ ಸಾವಿಗೆ ಕಾರಣವಾದ ಕಿರಾತಕನ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.
ಮೃತ ರಕ್ಷಿತಾಗೆ ಇತ್ತೀಚೆಗಷ್ಟೇ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಇದೇ ಗ್ರಾಮದ ಉಲ್ಲಾಸ್ ಗೌಡ ಎಂಬಾತ ರಕ್ಷಿತಾಳಿಗೆ ಈ ಹಿಂದೆ ಕಳುಹಿಸಿದ್ದ ಕೆಲವು ಮೆಸೇಜ್‌ಗಳು ಹಾಗೂ ಫೋಟೋಗಳನ್ನು ಇಟ್ಟುಕೊಂಡು ತೀವ್ರ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ರಕ್ಷಿತಾಳ ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಆ ಫೋಟೋ ಹಾಗೂ ಮೆಸೇಜ್‌ಗಳನ್ನು ಕಳುಹಿಸಿ ವಿಕೃತಿ ಮೆರೆದಿದ್ದಾನೆ.
ಮದುವೆಯಾಗಬೇಕಿದ್ದ ಯುವಕನಿಗೆ ಫೋಟೋ ಕಳುಹಿಸಿ ಉಲ್ಲಾಸ್ ಗೌಡ ಇಡೀ ಕುಟುಂಬದ ಮಾನ ಹರಾಜು ಹಾಕಿದ್ದರಿಂದ ತೀವ್ರ ಮನನೊಂದ ರಕ್ಷಿತಾ ಹಾಗೂ ಆಕೆಯ ಪೋಷಕರು, ಸಮಾಜಕ್ಕೆ ಮುಖ ತೋರಿಸಲಾಗದೆ ಗ್ರಾಮದ ತಮ್ಮ ಮನೆಯಲ್ಲೇ ವಿಷ ಸೇವಿಸಿದ್ದಾರೆ. ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಕೊನೆಯುಸಿರೆಳೆದಿದ್ದಾರೆ.
”ನಮ್ಮ ಸಾವಿಗೆ ಉಲ್ಲಾಸ್ ಗೌಡನೇ ನೇರ ಕಾರಣ. ಆತನ ಕಿರುಕುಳ ತಾಳಲಾರದೆ ನಾವು ಈ ನಿರ್ಧಾರ ಕೈಗೊಳ್ಳುತ್ತಿದ್ದೇವೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕು, ಉಲ್ಲಾಸ್ ಗೌಡ ಜೈಲಿಗೆ ಹೋಗಬೇಕು ಮತ್ತು ನಮ್ಮ ಸಾವಿಗೆ ನ್ಯಾಯ ಸಿಗಬೇಕು” ಎಂದು ಮೃತರಾದ ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದು, ತಲೆಮರೆಸಿಕೊಂಡಿದ್ದ ಆರೋಪಿ ಉಲ್ಲಾಸ್ ಗೌಡನ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.