Skip to main content

Police Roundup

“ಡಿಕೆಶಿ ಜೈಲಿಗೆ ಹೋದರೆ ನಾನೂ ಜೊತೆಗೆ ಹೋಗುವೆ”: ರಾಮನಗರದಲ್ಲಿ ವಾಟಾಳ್ ನಾಗರಾಜ್ ಘೋಷಣೆ!

Share News

ರಾಮನಗರ: “ಬಿಡದಿಯ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೂ ಸ್ವಾಧೀನ ಕೈ ಬಿಡಲು ಡಿನೋಟಿಫಿಕೇಷನ್ ಮಾಡಬೇಕು. ರೈತರ ಹಿತಾಸಕ್ತಿಗಾಗಿ ಮಾಡುವ ಈ ಕೆಲಸದಿಂದ ಅವರೇನಾದರೂ ಜೈಲಿಗೆ ಹೋದರೆ, ನಾನೂ ಅವರನ್ನು ಬೆಂಬಲಿಸಿ ಜೈಲಿಗೆ ಹೋಗಲು ಸಿದ್ಧ” ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

 

​ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ರಾಮನಗರದ ಐಜೂರು ವೃತ್ತದಲ್ಲಿ ಕರುನಾಡ ಸೇನೆ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 

ಯೋಜನೆ ಕುರಿತು ಸವಾಲು-ಪ್ರತಿಸವಾಲು ಹಾಕಿಕೊಳ್ಳುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಟಾಳ್ ನಾಗರಾಜ್ ತೀವ್ರ ವಾಗ್ದಾಳಿ ನಡೆಸಿದರು. “ಈ ಇಬ್ಬರು ನಾಯಕರು ಸವಾಲು ಹಾಕಲು ಪಾಳೇಗಾರರಲ್ಲ. ಇಂತಹ ಬೀದಿ ಕಾಳಗಗಳನ್ನು ಬಿಟ್ಟು ರೈತರ ಹಿತಾಸಕ್ತಿ ಮತ್ತು ಅವರ ಬದುಕಿನ ಕುರಿತು ಗಂಭೀರವಾಗಿ ಯೋಚಿಸಬೇಕು” ಎಂದು ಅವರು ಆಗ್ರಹಿಸಿದರು.

 

​”ರೈತರ ಅತ್ಯಂತ ಫಲವತ್ತಾದ ಪ್ರದೇಶದಲ್ಲಿ ಟೌನ್‌ಶಿಪ್ ಮಾಡುವ ಅಗತ್ಯವಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೆ ಕುಮಾರಸ್ವಾಮಿ ಅವರು ಶುರು ಮಾಡಿದ್ದ ಯೋಜನೆಯನ್ನು ನಾನು ಮುಂದುವರಿಸುತ್ತಿರುವೆ ಎಂದು ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ, ರೈತರೇ ಬೇಡ ಎನ್ನುತ್ತಿರುವಾಗ ಈ ಯೋಜನೆಯನ್ನು ಕೈ ಬಿಡಬಹುದಲ್ಲವೇ? ಮುಂದುವರಿಸುವ ಹಠವೇಕೆ?” ಎಂದು ಪ್ರಶ್ನಿಸಿದರು.

 

ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ನಡೆಯನ್ನು ಪ್ರಶ್ನಿಸಿದ ವಾಟಾಳ್ ನಾಗರಾಜ್, “ಶಾಸಕರು ಭೂ ಮಾಲೀಕರಿಗೆ ಪರಿಹಾರದ ಚೆಕ್ ನೀಡಲು ಅಷ್ಟೊಂದು ಅವಸರ ಏನಿತ್ತು? ರೈತರಿಗೆ ಪ್ರತಿ ಎಕರೆಗೆ ₹2.07 ಕೋಟಿ ಪರಿಹಾರ ನೀಡುವ ಕುರಿತು ಸರ್ಕಾರ ಎಲ್ಲಿ ತೀರ್ಮಾನಿಸಿತು ಎಂಬುದು ಯಾರಿಗೂ ಗೊತ್ತಿಲ್ಲ. ಈ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ತಕ್ಷಣವೇ ವಿಶೇಷ ಅಧಿವೇಶನ ಕರೆಯಬೇಕು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಲಿ” ಎಂದು ಸಲಹೆ ನೀಡಿದರು.

 

ಬಹಿರಂಗ ಚರ್ಚೆಯ ಸವಾಲುಗಳು, ದೇವರ ಮುಂದೆ ಪ್ರಮಾಣ ಮಾಡುವುದು, ಜನರ ಮುಂದೆ ಹೊಡೆದಾಡುವಂತಹ ಹುಡುಗಾಟದ ರಾಜಕಾರಣವನ್ನು ನಾಯಕರು ಬಿಡಬೇಕು. ಇಲ್ಲಿ ರಾಜಕೀಯ ಪ್ರತಿಷ್ಠೆಗಿಂತ ರೈತರ ಬದುಕು ಮುಖ್ಯವಾಗಿದ್ದು, ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈ ಬಿಡುವುದೇ ರಾಜ್ಯ ಸರ್ಕಾರಕ್ಕೆ ಒಳ್ಳೆಯದು ಎಂದು ಎಚ್ಚರಿಸಿದರು.

 

ಐಜೂರು ವೃತ್ತದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಕರುನಾಡು ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್ ಐಜೂರು, ಉಸ್ತುವಾರಿ ಅಧ್ಯಕ್ಷ ಗಂಗಾಧರ್, ಜಿಲ್ಲಾಧ್ಯಕ್ಷ ಸಿ.ಎಸ್ ಜಯಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಕ್ಷ್ಮಿ ಕೆಂಪರಾಜು, ಪ್ರಮುಖರಾದ ಕುಮಾರ್, ಸಿ.ಎಂ. ವಿಜಯ್, ಪಿ. ಸುರೇಶ್ ಕೊತ್ತಿಪುರ, ವೆಂಕಟಲಕ್ಷ್ಮಿ, ಪಾರ್ಥಸಾರಥಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin