ಶಿವಮೊಗ್ಗ: ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಒಂದಾದ ಶರಾವತಿ ಜಲ ವಿದ್ಯುದಾಗಾರದಲ್ಲಿ (Sharavathi Generating Station) ಪೆನ್‌ಸ್ಟಾಕ್ ಪೈಪ್‌ಲೈನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನೀರು ಸೋರಿಕೆಯಾಗಿ ವಿದ್ಯುದಾಗರದ ಒಳಭಾಗಕ್ಕೆ ನುಗ್ಗಿದ ಘಟನೆ ನಿನ್ನೆ ನಡೆದಿದೆ. ಇದರಿಂದಾಗಿ ಜಲ ವಿದ್ಯುದಾಗಾರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶರಾವತಿ ವಿದ್ಯುದಾಗಾರದಲ್ಲಿ ತಲಾ 103 ಮೆಗಾವಾಟ್ ಸಾಮರ್ಥ್ಯದ ಒಟ್ಟು 10 ಘಟಕಗಳಿದ್ದು, ಒಟ್ಟು 1,035 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ನಿನ್ನೆ ಮಧ್ಯಾಹ್ನ ಇಲ್ಲಿನ 7ನೇ ಘಟಕದ ಪೆನ್‌ಸ್ಟಾಕ್ ಪೈಪ್‌ಲೈನ್‌ನಲ್ಲಿ ಹಠಾತ್ ದೋಷ ಉಂಟಾಗಿ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ. ಸೋರಿಕೆಯಾದ ನೀರು ವೇಗವಾಗಿ ವಿದ್ಯುದಾಗರದ ಒಳಭಾಗಕ್ಕೆ ನುಗ್ಗಿದೆ.
ಅದೃಷ್ಟವಶಾತ್ ಘಟನೆ ನಡೆದ ವೇಳೆ 7ನೇ ಘಟಕವನ್ನು ನಿಯಮಿತ ನಿರ್ವಹಣಾ ಕಾಮಗಾರಿಗಾಗಿ (Maintenance) ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಆ ಘಟಕದಲ್ಲಿ ವಿದ್ಯುತ್ ಉತ್ಪಾದನೆ ನಡೆಯುತ್ತಿರಲಿಲ್ಲ. ಘಟಕದ ಪೈಪ್‌ಲೈನ್‌ನಲ್ಲಿದ್ದ ನೀರು ಮಾತ್ರ ಹೊರಬಂದು ಒಳಭಾಗಕ್ಕೆ ನುಗ್ಗಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಪ್ರಮಾಣದ ತಾಂತ್ರಿಕ ಹಾನಿ ಸಂಭವಿಸಿಲ್ಲ ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಮೂಲಗಳು ಸ್ಪಷ್ಟಪಡಿಸಿದ್ದು, ಸದ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ಈ ಜಲ ವಿದ್ಯುದಾಗಾರದ ಪೆನ್‌ಸ್ಟಾಕ್ ಪೈಪ್‌ಲೈನ್‌ಗಳನ್ನು 1964ರಲ್ಲಿ ಅಳವಡಿಸಲಾಗಿದ್ದು, ಇವು ಅತ್ಯಂತ ಹಳೆಯದಾಗಿರುವ ಕಾರಣದಿಂದಲೇ ಈ ತಾಂತ್ರಿಕ ದೋಷ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಈ ಹಿಂದೆ ಇದೇ ಶರಾವತಿ ವಿದ್ಯುದಾಗಾರದಲ್ಲಿ ಸಂಭವಿಸಿದ್ದ ಭೀಕರ ಬೆಂಕಿ ಅವಘಡದಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ಆ ಘಟನೆಯ ಬಳಿಕ ನಡೆದ ಮತ್ತೊಂದು ಪ್ರಮುಖ ತಾಂತ್ರಿಕ ದೋಷ ಇದಾಗಿದ್ದು, ಹಳೆಯ ಪೈಪ್‌ಲೈನ್‌ಗಳ ಸುರಕ್ಷತೆಯ ಬಗ್ಗೆ ತಜ್ಞರು ನಿಗಾ ವಹಿಸಬೇಕಾದ ಅಗತ್ಯತೆಯನ್ನು ನೆನಪಿಸಿದೆ.