ಸಿದ್ದಿಪೇಟೆ (ತೆಲಂಗಾಣ): ಭೂ ಪರಿವರ್ತನೆಗೆ ಸಂಬಂಧಿಸಿದ ಫೈಲ್ ಪ್ರಕ್ರಿಯೆಗೊಳಿಸಲು ದೂರುದಾರರಿಂದ ಬರೋಬ್ಬರಿ 70,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಚೆರ್ಯಾಲ ಮಂಡಲದ ತಹಶೀಲ್ದಾರ್ ಅವರನ್ನು ಭ್ರಷ್ಟಾಚಾರ ವಿರೋಧಿ ಬ್ಯೂರೋ (ACB) ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಸಿದ್ದಿಪೇಟೆ ಜಿಲ್ಲೆಯ ಚೆರ್ಯಾಲ ಮಂಡಲದ ತಹಶೀಲ್ದಾರ್ ಕೊರ್ರಾ ದಿಲೀಪ್ ನಾಯಕ್ ಎಸಿಬಿ ಬಲೆಗೆ ಬಿದ್ದ ಲಂಚಬುರುಕ ಅಧಿಕಾರಿಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ನಾಗಪುರಿ ಗ್ರಾಮದ ವ್ಯಾಪ್ತಿಯಲ್ಲಿ 11 ನಾಲಾ (NALA – ಕೃಷಿಯೇತರ ಭೂಮಿ) ಪರಿವರ್ತನೆಗೆ ಸಂಬಂಧಿಸಿದ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ತಹಶೀಲ್ದಾರ್ ದಿಲೀಪ್ ನಾಯಕ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಈಗಾಗಲೇ 8 ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಅಧಿಕೃತವಾಗಿ ಕೆಲಸ ಮುಗಿಸಿಕೊಡಲು ದೂರುದಾರರಿಂದ ₹70,000 ಹಣ ನೀಡುವಂತೆ ಪಟ್ಟು ಹಿಡಿದಿದ್ದರು.
ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಈ ಕುರಿತು ಭ್ರಷ್ಟಾಚಾರ ವಿರೋಧಿ ಬ್ಯೂರೋ (ACB) ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರುದಾರರ ಮಾಹಿತಿ ಆಧರಿಸಿ ಎಸಿಬಿ ಅಧಿಕಾರಿಗಳು ಹೂಡಿದ ಜಾಲದಲ್ಲಿ ತಹಶೀಲ್ದಾರ್ ದಿಲೀಪ್ ನಾಯಕ್ ಸಿಲುಕಿಕೊಂಡಿದ್ದಾರೆ. ದೂರುದಾರರಿಂದ ₹70,000 ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ದೃಶ್ಯವನ್ನು ಹಠಾತ್ ದಾಳಿ ನಡೆಸಿದ ಎಸಿಬಿ ತಂಡ ಪತ್ತೆಹಚ್ಚಿ, ಆರೋಪಿಯನ್ನು ವಶಕ್ಕೆ ಪಡೆದಿದೆ. ದಾಳಿಯ ವೇಳೆ ಲಂಚದ ಸಂಪೂರ್ಣ ಮೊತ್ತವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆರೋಪಿ ತಹಶೀಲ್ದಾರ್ ಕೊರ್ರಾ ದಿಲೀಪ್ ನಾಯಕ್ ಅವರು ಸಾರ್ವಜನಿಕ ಸೇವಕರಾಗಿದ್ದುಕೊಂಡು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅನಗತ್ಯ ಲಾಭ ಪಡೆಯುವ ಉದ್ದೇಶದಿಂದ ತಮ್ಮ ಕರ್ತವ್ಯವನ್ನು ಅತ್ಯಂತ ಅನುಚಿತವಾಗಿ ಮತ್ತು ಅಪ್ರಾಮಾಣಿಕವಾಗಿ ನಿರ್ವಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಎಸಿಬಿ ಅಧಿಕಾರಿಗಳು ನಡೆಸುತ್ತಿರುವ ಈ ನಿರಂತರ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.