ಆನೇಕಲ್: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಶಸ್ತ್ರಚಿಕಿತ್ಸೆ ಘಟಕದಲ್ಲಿ (Operation Theatre) ಸಂಭವಿಸಿದ ಶಾರ್ಟ್ ಸರ್ಕಿಟ್ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 8:30ರ ಹೊತ್ತಿಗೆ ಶಸ್ತ್ರಚಿಕಿತ್ಸೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಮಹಡಿ ದಟ್ಟ ಹೊಗೆಯಿಂದ ಆವೃತವಾಯಿತು. ಅದೃಷ್ಟವಶಾತ್, ಘಟನೆ ಸಂಭವಿಸಿದ ಸಮಯದಲ್ಲಿ ಘಟಕದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿ ಆತಂಕದಿಂದ ಹೊರಗೆ ಓಡಿ ಬಂದರು. ವಿಷಯ ತಿಳಿಯುತ್ತಿದ್ದಂತೆ ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಮುಂಭಾಗ ಜಮಾಯಿಸಿದರು. ಬೆಳಿಗ್ಗೆ 9:30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸಿದ್ದೇಶ್ವರ್ ಹಾಗೂ ಅನೇಕಲ್ ಠಾಣಾ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಘಟನೆ ನಡೆದ ವೇಳೆ ಆಸ್ಪತ್ರೆಯಲ್ಲಿ ಎಂಟು ಬಾಣಂತಿಯರಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಆಸ್ಪತ್ರೆ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದರು. ಸದ್ಯ ಎಲ್ಲ ಬಾಣಂತಿಯರು ಮತ್ತು ರೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ವೈದ್ಯಾಧಿಕಾರಿ ಜ್ಞಾನ ಪ್ರಕಾಶ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಮದನಿ, ತಾಲ್ಲೂಕು ವೈದ್ಯಾಧಿಕಾರಿ ರವಿ, ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ನಾಗಮೂರ್ತಿ, ಡಿವೈಎಸ್ಪಿ ಗೋಪಾಲ್ ನಾಯಕ್ ಹಾಗೂ ಇನ್ಸ್ಪೆಕ್ಟರ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಈ ಶಸ್ತ್ರಚಿಕಿತ್ಸೆ ಘಟಕದಲ್ಲಿ ಹೊಸ ಆಪರೇಷನ್ ಟೇಬಲ್ ಸೇರಿದಂತೆ ವಿವಿಧ ಆಧುನಿಕ ಪರಿಕರಗಳನ್ನು ಸೋಮವಾರವಷ್ಟೇ ಉದ್ಘಾಟಿಸಿ ಪೂಜೆ ಸಲ್ಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಮರುದಿನವೇ (ಮಂಗಳವಾರ) ಸಂಭವಿಸಿದ ಈ ಅಗ್ನಿ ಅವಘಡದಿಂದಾಗಿ ಹೊಸ ಪರಿಕರಗಳಿಗೆಲ್ಲ ಹೊಗೆ ತುಂಬಿಕೊಂಡಿದೆ.
ಅಗ್ನಿ ಅವಘಡದಿಂದ ಹಾನಿಗೊಳಗಾಗಿರುವ ಶಸ್ತ್ರಚಿಕಿತ್ಸಾ ಘಟಕದ ಪರಿಕರಗಳನ್ನು ಮರುಸ್ಥಾಪಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ವಾರದೊಳಗೆ ಘಟಕವನ್ನು ಮರುರೂಪಿಸಿ, ಮುಂದಿನ 15 ದಿನಗಳಲ್ಲಿ ರೋಗಿಗಳ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭರವಸೆ ನೀಡಿದ್ದಾರೆ.