Skip to main content

Police Roundup

ಕಲಬುರಗಿ ಜೈಲು ಬ್ರೇಕ್ ಪ್ರಕರಣ: ತಲೆಮರೆಸಿಕೊಂಡಿದ್ದ ಮತ್ತೋರ್ವ ಜೈಲುಹಕ್ಕಿ ಸಾಗರ್ ಭಾಲ್ಕಿಯಲ್ಲಿ ಅರೆಸ್ಟ್!

Share News

ಕಲಬುರಗಿ/ಬೀದರ್: ಕಲಬುರಗಿ ಕೇಂದ್ರ ಕಾರಾಗೃಹದ ಗೋಡೆ ಹಾರಿ ಮೂವರು ಕೈದಿಗಳು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

​ಬಂಧಿತ ಆರೋಪಿಯನ್ನು ಸಾಗರ್ ಎಂದು ಗುರುತಿಸಲಾಗಿದೆ. ಈತ ಜೈಲಿನಿಂದ ತಪ್ಪಿಸಿಕೊಂಡ ದಿನದಿಂದ ಬೀದರ್ ಹಾಗೂ ಭಾಲ್ಕಿ ಭಾಗದ ಜಮೀನುಗಳಲ್ಲಿ ಅಡಗಿಕುಳಿತು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ.

 

ಬೀದರ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಸಜಾ ಕೈದಿಯಾಗಿದ್ದ ಸಾಗರ್, ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಕಲಬುರಗಿ ಕೇಂದ್ರ ಕಾರಾಗೃಹ ಸೇರಿದ್ದ. ಆದರೆ ಇತ್ತೀಚೆಗೆ ಜೈಲಿನ ಕಟ್ಟುನಿಟ್ಟಿನ ಭದ್ರತೆಯನ್ನು ಭೇದಿಸಿ ತನ್ನ ಇಬ್ಬರು ಸಹಚರರೊಂದಿಗೆ ಜೈಲಿನಿಂದ ಪರಾರಿಯಾಗಿದ್ದ. ಪೊಲೀಸರ ಕಣ್ಣಿಗೆ ಮಣ್ಣೆರಚಲು ಹಗಲಿಡೀ ನಿರ್ಜನ ಜಮೀನುಗಳಲ್ಲಿ ಅವಿತುಕೊಳ್ಳುತ್ತಿದ್ದ ಈತ, ಕತ್ತಲಾಗುತ್ತಿದ್ದಂತೆ ಭಾಲ್ಕಿ ಪಟ್ಟಣಕ್ಕೆ ಬರುತ್ತಿದ್ದ ಎನ್ನಲಾಗಿದೆ.

 

ಆರೋಪಿ ಸಾಗರ್ ಭಾಲ್ಕಿ ಬಸ್ ನಿಲ್ದಾಣದ ಮೂಲಕ ನೆರೆ ರಾಜ್ಯಕ್ಕೆ ತಲೆಮರೆಸಿಕೊಳ್ಳಲು ದೊಡ್ಡ ಸ್ಕೆಚ್ ಹಾಕಿದ್ದಾನೆ ಎಂಬ ಖಚಿತ ಮಾಹಿತಿ ಬೀದರ್ ಪೊಲೀಸರಿಗೆ ಲಭ್ಯವಾಗಿತ್ತು.

 

ಬಂಧನದ ಪ್ರಕ್ರಿಯೆ ಮುಗಿದ ಬಳಿಕ ಕೈದಿ ಸಾಗರನನ್ನು ಬೀದರ್ ಪೊಲೀಸರು ಮುಂದಿನ ಕ್ರಮಕ್ಕಾಗಿ ಕಲಬುರಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕಲಬುರಗಿ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಸದ್ಯ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪರಾರಿಯಾಗಿದ್ದ ಮೂವರ ಪೈಕಿ ಈಗಾಗಲೇ ಇಬ್ಬರು ಪೊಲೀಸರ ಬಲೆಗೆ ಬಿದ್ದಂತಾಗಿದ್ದು, ಇಲಾಖೆಯ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

 

​ವರದಿ: ಗುಂಡು ಕುಲಕರ್ಣಿ, ವಿಜಯಪುರ – ಕಲಬುರಗಿ


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin