ಹರಪನಹಳ್ಳಿ: ಹರಪನಹಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ (ಡಿವೈಎಸ್ಪಿ) ಡಾ. ಸಂತೋಷ ಚವ್ಹಾಣ, ಕೆ.ಎಸ್.ಪಿ.ಎಸ್. ರವರು ಚಿಗಟೇರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ಕೈಗೊಂಡರು.
ಪರಿವೀಕ್ಷಣೆ ವೇಳೆ ಠಾಣೆಯಲ್ಲಿನ ವಿವಿಧ ದಾಖಲಾತಿಗಳ ನಿರ್ವಹಣೆ, ವಿವಿಧ ಪ್ರಕರಣಗಳಲ್ಲಿ ಜಪ್ತುಪಡಿಸಿಕೊಂಡಿರುವ ವಾಹನಗಳ ಸೂಕ್ತ ವಿಲೇವಾರಿ ಹಾಗೂ ಠಾಣಾ ಆವರಣದ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಪರಿಶೀಲಿಸಿದ ಅವರು, ಸ್ಥಳದಲ್ಲಿದ್ದ ಪಿ.ಎಸ್.ಐ. ಅವರಿಗೆ ಅಗತ್ಯ ನಿರ್ದೇಶನ ಹಾಗೂ ಸೂಕ್ತ ಸೂಚನೆಗಳನ್ನು ನೀಡಿದರು.
ನಂತರ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಬ್ರೀಫಿಂಗ್ ಸಭೆ ನಡೆಸಿದ ಡಿವೈಎಸ್ಪಿ ಅವರು, ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆ-ಕಾನೂನುಗಳು ಹಾಗೂ ಇಲಾಖೆಯ ಸುತ್ತೋಲೆಗಳ ಜಾರಿ ಕುರಿತು ವಿವರಿಸಿದರು.
ಅಲ್ಲದೆ, ಲಾಕ್ಡ್ ಹೌಸ್ ಬೀಟ್ ವ್ಯವಸ್ಥೆ, ಗ್ರಾಮ ಗಸ್ತು, ‘ಮನೆ ಮನೆಗೆ ಪೊಲೀಸ್’ ಹಾಗೂ ‘ಆಸರೆ’ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚಿಸಿದರು. ಸೈಬರ್ ಅಪರಾಧಗಳು ಹಾಗೂ ಸ್ವತ್ತಿನ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ನಿರ್ದೇಶನ ನೀಡಿದ ಅವರು, ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಿ ಕುಂದುಕೊರತೆ ಪರಿಹಾರಕ್ಕೆ ಸೂಕ್ತ ಭರವಸೆ ನೀಡಿದರು.