ಹಾನಗಲ್: ಪಟ್ಟಣದ ಮಧ್ಯಭಾಗದಲ್ಲಿ ತಡಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧೀನದಲ್ಲಿರುವ ರಾಜ್ಯ ಹೆದ್ದಾರಿ (ಎಸ್‌ಎಚ್–1) ರಸ್ತೆಯನ್ನು ಅಗತ್ಯ ಅನುಮತಿಯಿಲ್ಲದೆ ಅಗೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸಾರಿಗೆ ಘಟಕದ ಎದುರು ಸಾಂವಸಗಿ ಗ್ರಾಮದ ಕಡೆಯಿಂದ ಆರಂಭವಾಗಿರುವ ಈ ಕಾಮಗಾರಿಯಲ್ಲಿ ಜೆಸಿಬಿ ಯಂತ್ರಗಳ ಮೂಲಕ ರಸ್ತೆ ಮಧ್ಯಭಾಗವನ್ನು ಅಗೆಯಲಾಗುತ್ತಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ಸಾರಿಗೆ ಘಟಕದಿಂದ ಎಪಿಎಂಸಿ ವೇಬ್ರಿಡ್ಜ್‌ವರೆಗೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಸ್ಥಳದಲ್ಲಿ ಸಮರ್ಪಕ ಸುರಕ್ಷತಾ ಬ್ಯಾರಿಕೇಡ್, ಎಚ್ಚರಿಕೆ ಫಲಕಗಳು ಹಾಗೂ ರಾತ್ರಿ ವೇಳೆಯ ದೀಪಗಳ ವ್ಯವಸ್ಥೆ ಇಲ್ಲದಿರುವುದರಿಂದ ಶಾಲಾ ಬಸ್‌ಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಅಪಾಯದ ನಡುವೆಯೇ ಸಂಚರಿಸುವಂತಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಗುಣಮಟ್ಟದ ರಾಜ್ಯ ಹೆದ್ದಾರಿಯನ್ನು ಯಾವುದೇ ವೈಜ್ಞಾನಿಕ ಯೋಜನೆ ಇಲ್ಲದೆ ಹಾಳು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಸಲು ಪಿಡಬ್ಲ್ಯೂಡಿ ಇಲಾಖೆಯಿಂದ “ರೈಟ್ ಆಫ್ ವೇ (ROW)” ಅನುಮತಿ, ರಸ್ತೆ ಅಗೆತ ಪರವಾನಗಿ, ಎನ್‌ಒಸಿ ಹಾಗೂ ರಸ್ತೆ ಪುನಃಸ್ಥಾಪನೆಗೆ ಸಂಬಂಧಿಸಿದ ಷರತ್ತುಗಳನ್ನು ಪಾಲಿಸುವುದು ಕಡ್ಡಾಯ. ಆದರೆ ಈ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎನ್ನಲಾಗಿದ್ದು, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಿದ ರಸ್ತೆ ಹಾಳಾದರೆ ದುರಸ್ತಿ ಹೊಣೆ ಯಾರು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಸಾರಿಗೆ ಘಟಕದಿಂದ ಆನಿಕೆರೆವರೆಗೆ ಸುಮಾರು 3.5 ಕಿ.ಮೀ. ಉದ್ದದ ಪೈಪ್‌ಲೈನ್ ಅಳವಡಿಸುವ ಯೋಜನೆಯಾಗಿದ್ದು, ನಿಯಮ ಉಲ್ಲಂಘಿಸಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
“ರಸ್ತೆ ಅಗೆತದಿಂದ ಉಂಟಾಗುವ ಹಾನಿಯ ವೆಚ್ಚವನ್ನು ಭರಿಸಿ, ಇಲಾಖೆಯಿಂದ ಅಧಿಕೃತ ಅನುಮತಿ ಪಡೆದ ನಂತರವೇ ಇಂತಹ ಕಾಮಗಾರಿ ಕೈಗೊಳ್ಳಬೇಕು. ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.”
– ಎಸ್. ದೇವರಾಜ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ