ಹಾವೇರಿ: ಕಳ್ಳತನಕ್ಕೊಳಗಾದ ಚಿನ್ನಾಭರಣ, ಮೊಬೈಲ್ ಹಾಗೂ ವಾಹನಗಳು ಮರಳಿ ಸಿಗುವುದೇ ಅನುಮಾನ ಎಂಬ ಸಾರ್ವಜನಿಕರ ಆತಂಕಕ್ಕೆ ಹಾವೇರಿ ಜಿಲ್ಲಾ ಪೊಲೀಸರು ಕಾರ್ಯಕ್ಷಮತೆಯ ಮೂಲಕ ವಿಶ್ವಾಸದ ಉತ್ತರ ನೀಡಿದ್ದಾರೆ. ವಿವಿಧ ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ, ಬರೋಬ್ಬರಿ ₹2 ಕೋಟಿ 30 ಲಕ್ಷಕ್ಕೂ ಅಧಿಕ ಮೌಲ್ಯದ ಕಳುವಾದ ಸ್ವತ್ತನ್ನು ಪತ್ತೆಹಚ್ಚಿ ಮೂಲ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಪ್ರಾಪರ್ಟಿ ಪರೇಡ್’ ಕಾರ್ಯಕ್ರಮದಲ್ಲಿ, ಒಟ್ಟು 46 ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನಾಭರಣ, ಬೆಳ್ಳಿ, ನಗದು, ಮೊಬೈಲ್ ಫೋನ್‌ಗಳು ಹಾಗೂ ಕಾರು, ಜೀಪ್, ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ವಸ್ತುಗಳನ್ನು ಅವುಗಳ ಮಾಲೀಕರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಹಾವೇರಿ ಜಿಲ್ಲಾ ಪೊಲೀಸರು ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ದಕ್ಷಿಣ ಭಾರತದಲ್ಲೇ ಗಮನಾರ್ಹ ಸಾಧನೆ ಮಾಡಿದ್ದಾರೆ. ಒಟ್ಟು 2,527 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದ್ದು, ಇದುವರೆಗೆ 2,014 ಮೊಬೈಲ್‌ಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 539 ಮೊಬೈಲ್‌ಗಳನ್ನು ಈಗಾಗಲೇ ಮಾಲೀಕರಿಗೆ ಹಿಂತಿರುಗಿಸಲಾಗಿದ್ದು, ಈ ಮೂಲಕ ಹಾವೇರಿ ಜಿಲ್ಲೆ ಹೊಸ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪೊಲೀಸರು ವಿವಿಧ ಕಳ್ಳತನ ಪ್ರಕರಣಗಳಲ್ಲಿ ಸುಮಾರು ₹1.19 ಕೋಟಿ ಮೌಲ್ಯದ 1,088 ಗ್ರಾಂ ಚಿನ್ನ ಹಾಗೂ ₹35 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಇದರೊಂದಿಗೆ 16 ಕಳ್ಳತನಕ್ಕೊಳಗಾದ ವಾಹನಗಳನ್ನು ಪತ್ತೆಹಚ್ಚಿ ಒಪ್ಪಿಸಲಾಗಿದೆ.
ಕಳ್ಳತನ ಪ್ರಕರಣಗಳನ್ನು ತ್ವರಿತವಾಗಿ ಭೇದಿಸಿ, ಕಳೆದುಹೋದ ಅಮೂಲ್ಯ ಆಸ್ತಿಯನ್ನು ಸುರಕ್ಷಿತವಾಗಿ ಮರುಪಡೆಯುವಲ್ಲಿ ಹಾವೇರಿ ಜಿಲ್ಲಾ ಪೊಲೀಸರು ತೋರಿದ ದಕ್ಷತೆ ಸಾರ್ವಜನಿಕರಲ್ಲಿ ಇಲಾಖೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಪರಾಧ ನಿಯಂತ್ರಣದ ಜೊತೆಗೆ ಸಾರ್ವಜನಿಕರ ಆಸ್ತಿಯನ್ನು ಸುರಕ್ಷಿತವಾಗಿ ಮರಳಿ ಒಪ್ಪಿಸುವ ಕಾರ್ಯದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ ರಾಜ್ಯಕ್ಕೇ ಮಾದರಿಯಾಗಿದೆ.
“ಕಳ್ಳತನಕ್ಕೊಳಗಾದ ಅಮೂಲ್ಯ ವಸ್ತುಗಳು ಮರಳಿ ಸಿಗುವುದು ಅಪರೂಪ ಎನ್ನುವ ಪರಿಸ್ಥಿತಿಯಲ್ಲಿ ಹಾವೇರಿ ಜಿಲ್ಲಾ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆ ನಮಗೆ ಅತ್ಯಂತ ಸಂತಸ ತಂದಿದೆ. ತಮ್ಮ ಅಮೂಲ್ಯ ವಸ್ತುಗಳನ್ನು ಮರಳಿ ಪಡೆದ ಮಾಲೀಕರು ಪೊಲೀಸ್ ಇಲಾಖೆಗೆ ಮುಕ್ತಕಂಠದಿಂದ ಕೃತಜ್ಞತೆ ಸಲ್ಲಿಸಿದ್ದಾರೆ.”
”ಸಾರ್ವಜನಿಕರ ಆಸ್ತಿ ರಕ್ಷಣೆ ಹಾಗೂ ಅಪರಾಧ ನಿಯಂತ್ರಣಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ ಅತ್ಯುನ್ನತ ಆದ್ಯತೆ ನೀಡುತ್ತಿದೆ. ಕಳ್ಳತನ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಿ, ಕಳುವಾದ ಆಸ್ತಿಯನ್ನು ಮೂಲ ಮಾಲೀಕರಿಗೆ ಮರಳಿ ತಲುಪಿಸುವ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ತಂತ್ರಜ್ಞಾನದ ಪರಿಣಾಮಕಾರಿ ಬಳಕೆ, ಸಮನ್ವಯದ ತನಿಖೆ ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆಯೂ ಅಪರಾಧಗಳಿಗೆ ಕಡಿವಾಣ ಹಾಕುವ ಜೊತೆಗೆ ಜನಸ್ನೇಹಿ ಪೊಲೀಸ್ ಸೇವೆಯನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ.”
– ಯಶೋಧಾ ವಂಟಗೋಡಿ, ಎಸ್.ಪಿ, ಹಾವೇರಿ.