Skip to main content

Police Roundup

ಹದಗೆಟ್ಟ ರಟ್ಟೀಹಳ್ಳಿಯ ರಸ್ತೆಗಳು: ತಗ್ಗು-ಗುಂಡಿಗಳಿಂದ ಕಂಗೆಟ್ಟ ಸಾರ್ವಜನಿಕರು, ವಾಹನ ಸವಾರರ ಹರಸಾಹಸ!

Share News

ರಟ್ಟೀಹಳ್ಳಿ: ಪಟ್ಟಣದಾದ್ಯಂತ ಮುಖ್ಯ ರಸ್ತೆ ಹಾಗೂ ವಿವಿಧ ಓಣಿಗಳ ರಸ್ತೆಗಳು ತೀವ್ರವಾಗಿ ಹಾಳಾಗಿದ್ದು, ನಿತ್ಯ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಬೇಸಿಗೆಯಲ್ಲಿ ಧೂಳಿನ ಅಭೂತಪೂರ್ವ ಕಿರಿಕಿರಿ ಒಂದೆಡೆಯಾದರೆ, ಮಳೆಗಾಲದಲ್ಲಿ ತಗ್ಗು-ಗುಂಡಿಗಳಲ್ಲಿ ನೀರು ನಿಂತು ಅಪಘಾತಗಳು ಸಂಭವಿಸುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.

 

​ಸಂಚಾರಕ್ಕೆ ಸಂಚಕಾರ ತಂದ ತಗ್ಗು-ಗುಂಡಿಗಳು:

ಪಟ್ಟಣದ ಪ್ರಮುಖ ರಸ್ತೆಗಳಾದ ಕುಮಾರೇಶ್ವರ ಹೈಸ್ಕೂಲ್ ರಸ್ತೆ, ಕುರಬಗೇರಿ ಓಣಿ, ತುಮ್ಮಿನಕಟ್ಟಿ ರಸ್ತೆ, ಸಂತೆ ರಸ್ತೆ, ಕೋಟೆ ಓಣಿ, ಟೀಪುನಗರ, ಬನಶಂಕರಿ ನಗರ, ಶಿವಾಜಿ ನಗರ ಹಾಗೂ ಒಕ್ಕಲಗೇರಿ ಓಣಿ ಸೇರಿದಂತೆ ಪ್ರಮುಖ ಬಡಾವಣೆಗಳ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವೃದ್ಧರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಈ ರಸ್ತೆಗಳಿಗೆ ಡಾಂಬರೀಕರಣವಾಗಲಿ ಅಥವಾ ಕನಿಷ್ಠ ದುರಸ್ತಿ ಭಾಗ್ಯವಾಗಲಿ ಸಿಕ್ಕಿಲ್ಲ.

 

​ಕಿರಿದಾದ ರಸ್ತೆ, ಪೈಪ್‌ಲೈನ್ ಕಾಮಗಾರಿಯಿಂದ ಮತ್ತಷ್ಟು ಅಸ್ತವ್ಯಸ್ತ:

ಮಹಾಲಕ್ಷ್ಮಿ ವೃತ್ತದಿಂದ ಹಳೇ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣದಿಂದ ಶಿವಾಜಿ ಸರ್ಕಲ್ ಹಾಗೂ ಪಟ್ಟಣ ಪಂಚಾಯಿತಿಯಿಂದ ತುಮ್ಮಿನಕಟ್ಟೆಗೆ ತೆರಳುವ ರಸ್ತೆಗಳು ಅತ್ಯಂತ ಕಿರಿದಾಗಿವೆ. ರಟ್ಟೀಹಳ್ಳಿ ತಾಲ್ಲೂಕು ಕೇಂದ್ರವಾಗಿರುವುದರಿಂದ ನಿತ್ಯ ಸುಮಾರು 63 ಹಳ್ಳಿಗಳ ಗ್ರಾಮಸ್ಥರು ತಮ್ಮ ವಿವಿಧ ಕಚೇರಿ ಕೆಲಸಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಇತ್ತೀಚೆಗೆ ಪಟ್ಟಣದ ರಸ್ತೆಗಳಲ್ಲಿ ತುಂಗಭದ್ರಾ ನದಿ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆ ಅಗೆದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಪ್ರಮುಖ ರಸ್ತೆಗಳನ್ನು ತಕ್ಷಣವೇ ವಿಸ್ತರಿಸಿ ಡಾಂಬರೀಕರಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

​ಅನುದಾನ ಬಂದ ತಕ್ಷಣ ಅಭಿವೃದ್ಧಿ – ಮುಖ್ಯಾಧಿಕಾರಿ ಅಭಯ:

“ಅನುದಾನದ ಅಭಾವದಿಂದಾಗಿ ಪಟ್ಟಣದ ರಸ್ತೆಗಳ ಅಭಿವೃದ್ಧಿ ಕಾಮಗಾರಿ ವಿಳಂಬವಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣವೇ ಆದ್ಯತೆಯ ಮೇರೆಗೆ ಎಲ್ಲಾ ರಸ್ತೆಗಳ ಅಭಿವೃದ್ಧಿ ಹಾಗೂ ದುರಸ್ತಿ ಕೈಗೊಳ್ಳಲಾಗುವುದು,” ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ತಿಳಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin