ಅಥಣಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಅಥಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಬೆಳಗಟ್ಟದ ರಾಮಚಂದ್ರಪ್ಪ ಬೊರಯ್ಯ ಪೂಜಾರಿ, ತಂಗಡಿಯ ಪ್ರದೀಪ್ ಲಕ್ಷ್ಮಣ್ ಕಾಂಬಳೆ ಹಾಗೂ ಉಗಾರಖುರ್ದದ ರಾವ್‌ಸಾಹೇಬ್ ಶ್ರೀಕಾಂತ್ ಪಾಟೀಲ್ ಬಂಧಿತ ಆರೋಪಿಗಳು.
ಘಟನೆಯ ವಿವರ:
ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದ ಆರೋಪಿಗಳು, ದೇವರಡ್ಡೇರಹಟ್ಟಿ ಗ್ರಾಮದ ಸುಭಾಷ್ ಬಸಪ್ಪ ನಾಯಕ್ ಎಂಬುವವರ ಇಬ್ಬರು ಬಾಮೈದರಿಗೆ ನೇರ ನೇಮಕಾತಿ ಮೂಲಕ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಉದ್ಯೋಗಕ್ಕಾಗಿ ಒಟ್ಟು ₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು, 2021ರ ಅಕ್ಟೋಬರ್‌ನಿಂದ 2022ರ ಮಾರ್ಚ್ ಅವಧಿಯಲ್ಲಿ ಹಂತ-ಹಂತವಾಗಿ ಒಟ್ಟು ₹4.05 ಲಕ್ಷ ಹಣ ಪಡೆದುಕೊಂಡಿದ್ದರು.
ಹಣ ಪಡೆದರೂ ಕೆಲಸ ಕೊಡಿಸದೇ, ಇತ್ತ ಹಣವನ್ನೂ ವಾಪಸ್ ನೀಡದೆ ವಂಚಿಸಿದ್ದರಿಂದ ಸಂತ್ರಸ್ತ ಸುಭಾಷ್ ನಾಯಕ್ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಆ. 13ರಂದು ಪ್ರಕರಣ (ಕ್ರೈಂ ನಂ. 537/2026, ಐಪಿಸಿ ಸೆಕ್ಷನ್ 406, 420, 34) ದಾಖಲಿಸಿಕೊಂಡ ಅಥಣಿ ಪೊಲೀಸರು, ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.