ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಕಾಲೋನಿ ಸಮೀಪದ ಚೆಂಡುಮಲ್ಲಿಗೆ ಜಮೀನಿನಲ್ಲಿ ಭೀತಿ ಹುಟ್ಟಿಸಿದ್ದ ಗಾಯಗೊಂಡ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಜಮೀನಿನಲ್ಲಿ ಗಾಯಗೊಂಡು ಮಲಗಿದ್ದ ಹುಲಿಯನ್ನು ಕಂಡು ಗಾಬರಿಗೊಂಡ ಯುವಕ ರಾಜೇಂದ್ರ ತಕ್ಷಣವೇ ಸ್ಥಳೀಯರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ, ಡ್ರೋನ್ ಕ್ಯಾಮೆರಾ ಬಳಸಿ ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚಿದರು.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆಸಿದ ಸುದೀರ್ಘ ಕಾರ್ಯಾಚರಣೆಯ ಬಳಿಕ ಹುಲಿಗೆ ಅರವಳಿಕೆ ಮದ್ದು ನೀಡಿ ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಗಾಯಗೊಂಡಿರುವ ವ್ಯಾಘ್ರನಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಹುಲಿ ಸೆರೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.