ಬೆಂಗಳೂರು: ನೈಸ್ (NICE) ಕಂಪನಿಯನ್ನು ಬೇನಾಮಿ ಕಂಪನಿಗಳ ಮೂಲಕ ಸ್ವತಃ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಖರೀದಿ (ಟೇಕ್ ಓವರ್) ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾರಿ ಸ್ಪೋಟಕ ಆರೋಪ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿಯಾದ ‘ಜೆಪಿ ಭವನ’ದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಚಾರವಾಗಿ ಮುಂದಿನ ವಾರ ದಾಖಲೆಗಳ ಸಮೇತ ಕೃತ್ಯವನ್ನು ಬಹಿರಂಗಪಡಿಸುವುದಾಗಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರ ಪ್ರಮುಖ ಆರೋಪಗಳು:
ದೇಶದ ಬೃಹತ್ ಭೂ ಹಗರಣ: ಬಿಎಂಐಸಿ (BMIC) ಯೋಜನೆ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಯಲಾಗುತ್ತಿದೆ. ಇದು ಇಡೀ ಭಾರತದಲ್ಲೇ ಅತ್ಯಂತ ದೊಡ್ಡ “ಸ್ಕ್ಯಾಮ್ ಫಾರ್ ಸ್ಕೀಮ್” ಭೂ ಹಗರಣವಾಗಿದ್ದು, ಮುಖ್ಯಮಂತ್ರಿಯವರೇ ಈ ಲೂಟಿಯ ಮಹಾನಾಯಕ ಎಂದು ಕಿಡಿಕಾರಿದರು.
ಒಪ್ಪಂದ ಉಲ್ಲಂಘನೆ ಮತ್ತು ಅಕ್ರಮ ಟೋಲ್: ನೈಸ್ ಸಂಸ್ಥೆಯು 111 ಕಿ.ಮೀ. ರಸ್ತೆ ನಿರ್ಮಿಸುವ ಬದಲಾಗಿ ಕೇವಲ 5 ಕಿ.ಮೀ. ರಸ್ತೆ ನಿರ್ಮಿಸಿ ನಿಯಮ ಉಲ್ಲಂಘಿಸಿದೆ. ರೈತರಿಗೆ ಪರಿಹಾರ ನೀಡದೆ ಭೂಮಿ ಮಾರಾಟ ಮಾಡಿಕೊಳ್ಳಲಾಗಿದೆ. ಯೋಜನೆ ಪೂರ್ಣಗೊಳ್ಳದಿದ್ದರೂ ಅಕ್ರಮವಾಗಿ ಟೋಲ್ ಸುಲಿಗೆ ಮಾಡಲಾಗುತ್ತಿದ್ದು, ಇದಕ್ಕೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ.
ಶಾಂತಿಯುತ ಹೋರಾಟಕ್ಕೆ ಕರೆ: ನೈಸ್ ಅಕ್ರಮದ ವಿರುದ್ಧ ಜೆಪಿ ಅವರ ತತ್ತ್ವದಂತೆ ವಿದ್ಯಾರ್ಥಿಗಳು ಮತ್ತು ಯುವಜನತೆ ಬೀದಿಗಿಳಿದು ಶಾಂತಿಯುತವಾಗಿ ಜಾಗೃತಿ ಮೂಡಿಸಬೇಕು ಹಾಗೂ ಅಕ್ರಮ ಟೋಲ್ ಸಂಗ್ರಹವನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದರು.
ಉದ್ಯಾನವನ ಕಬಳಿಕೆ ಯತ್ನ: ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ ಮಾಡಿಕೊಡಲು ಸರ್ಕಾರ ಬೆಂಗಳೂರಿನ ಉದ್ಯಾನವನಗಳ 5% ಜಾಗವನ್ನು ಸಾರ್ವಜನಿಕ ಉದ್ದೇಶದ ನೆಪದಲ್ಲಿ ಬಳಸಿಕೊಳ್ಳಲು ಮಸೂದೆ ಅಂಗೀಕರಿಸಿದ್ದು, ನಗರದ ‘ಲಂಗ್ ಸ್ಪೇಸ್’ ನಾಶಪಡಿಸಲು ಹೊರಟಿದೆ.
ಇದೇ ವೇಳೆ ತಮ್ಮ ಮೇಲಿನ ಬೇನಾಮಿ ಆಸ್ತಿ ಆರೋಪಗಳನ್ನು ತಳ್ಳಿಹಾಕಿದ ಕುಮಾರಸ್ವಾಮಿ, “ನನ್ನ ಹೆಸರಿನಲ್ಲಿ ಯಾವುದೇ ಬೇನಾಮಿ ಆಸ್ತಿ ಇದೆ ಎಂದು ನಿರೂಪಿಸಿದರೆ ತಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಸರ್ಕಾರಕ್ಕೆ ಸವಾಲು ಎಸೆದರು.
ಸಭೆಯಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.