ಹೊನ್ನಾವರ: ಮದ್ಯದ ಅಮಲಿನಲ್ಲಿದ್ದ ಪತಿಯೇ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿ, ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ ಭೀಕರ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡಗುಂಡ ಗ್ರಾಮದಲ್ಲಿ ನಡೆದಿದೆ.
ದೊಡ್ಡಗುಂಡ ನಿವಾಸಿ ಮಂಗಲಾ ಗಣಪತಿ ನಾಯ್ಕ (27) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಗಣಪತಿ ಮಂಜುನಾಥ ನಾಯ್ಕ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಮನೆಯಲ್ಲಿದ್ದಾಗ ಕುಡಿದ ಮತ್ತಿನಲ್ಲಿದ್ದ ಗಣಪತಿ, ಮಲಗಿದ್ದ ಪತ್ನಿ ಮಂಗಲಾ ಅವರ ಕುತ್ತಿಗೆ ಹಿಚುಕಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಯಾವುದೂ ತಿಳಿಯದಂತೆ ಪತ್ನಿಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಕಥೆ ಕಟ್ಟಿ ಜನರನ್ನು ನಂಬಿಸಲು ಯತ್ನಿಸಿದ್ದಾನೆ.
ಸಹೋದರಿಯ ಅನುಮಾನದಿಂದ ಬಯಲಾಯ್ತು ಸತ್ಯ:
ಮಂಗಲಾ ಅವರ ಸಾವಿನ ಬಗ್ಗೆ ಸಹೋದರಿಗೆ ತೀವ್ರ ಅನುಮಾನ ವ್ಯಕ್ತವಾಗಿದ್ದರಿಂದ ತಕ್ಷಣವೇ ಮಂಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಚಾರಣೆ ವೇಳೆ ಪತಿ ಗಣಪತಿಯ ನಡವಳಿಕೆಯಲ್ಲಿ ಅನುಮಾನ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ತೀವ್ರ ತನಿಖೆಗೆ ಒಳಪಡಿಸಿದಾಗ, ಕುಡಿದ ಮತ್ತಿನಲ್ಲಿ ತಾನೇ ಕತ್ತು ಹಿಚುಕಿ ಕೊಲೆ ಮಾಡಿರುವುದಾಗಿ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.
ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.