ಸಾಗರ: ಚಾಲಕನ ನಿಯಂತ್ರಣ ತಪ್ಪಿ ಟೈಲ್ಸ್ ತುಂಬಿದ್ದ ಟಾಟಾ ಏಸ್ ವಾಹನವೊಂದು ಪಲ್ಟಿಯಾಗಿ, ಹಿಂಬದಿಯಲ್ಲಿ ಕುಳಿತಿದ್ದ 20 ವರ್ಷದ ಯುವಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಭೀಕರ ಘಟನೆ ಸಾಗರ ತಾಲೂಕಿನ ಬಳೆಗಾರು ಗ್ರಾಮದ ಸಮೀಪ ನಡೆದಿದೆ.
ಬಳಸಗೋಡು ಗ್ರಾಮದ ಹರೀಶ್ ಎಂಬುವವರ ಪುತ್ರ ರಾಕೇಶ್ (20) ಮೃತಪಟ್ಟ ದುರದೃಷ್ಟಕರ ಯುವಕ.
ಘಟನೆಯ ವಿವರ:
ಟೈಲ್ಸ್ ಸಾಮಗ್ರಿಗಳನ್ನು ಹೇರಿಕೊಂಡು ಸಾಗರದಿಂದ ತಾಳಗುಪ್ಪ ಕಡೆಗೆ ಹೊರಟಿದ್ದ ಟಾಟಾ ಏಸ್ ವಾಹನ ಬಳೆಗಾರು ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ವಾಹನದ ಹಿಂಬದಿಯಲ್ಲಿದ್ದ ರಾಕೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ರಸ್ತೆಯುದ್ದಕ್ಕೂ ಟೈಲ್ಸ್ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ತಕ್ಷಣ ಧಾವಿಸಿದ ಸ್ಥಳೀಯರು ಮೃತದೇಹವನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಲು ನೆರವಾದರು.
ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.