ಶಿವಮೊಗ್ಗ: ನಗರದ ಮಂಡ್ಲಿ ಭಾಗದ ಪೇಪರ್ ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಪಕ್ಕದಲ್ಲಿದ್ದ ಸುಮಾರು ಏಳುವರೆ ಅಡಿ ಉದ್ದದ ದೈತ್ಯ ಹೆಬ್ಬಾವನ್ನು ಉರಗ ಪ್ರೇಮಿ ‘ಸ್ನೇಕ್ ಕಿರಣ್’ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಕಾರ್ಖಾನೆ ಪಕ್ಕದ ಪ್ಲಾಸ್ಟಿಕ್ ಚೀಲಗಳ ರಾಶಿಯಲ್ಲಿ ಮಲಗಿದ್ದ ಸುಮಾರು 10 ಕೆಜಿಗೂ ಅಧಿಕ ತೂಕದ ಈ ಭಾರಿ ಪ್ರಮಾಣದ ಹೆಬ್ಬಾವನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದರು. ತಕ್ಷಣವೇ ಉರಗ ಪ್ರೇಮಿ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್, ಯಾವುದೇ ಅನಾಹುತ ಸಂಭವಿಸದಂತೆ ಜಾಗರೂಕತೆಯಿಂದ ಹೆಬ್ಬಾವನ್ನು ಹಿಡಿದು ಬಳಿಕ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಸ್ನೇಕ್ ಕಿರಣ್, “ಹಾವುಗಳು ಕಂಡಾಗ ಆತಂಕಪಟ್ಟು ಅವುಗಳನ್ನು ಕೊಲ್ಲಬೇಡಿ. ತಕ್ಷಣ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಂರಕ್ಷಿಸಿ” ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.