ಚಿಕ್ಕನಾಯಕನಹಳ್ಳಿ : ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ ಗ್ರಾಮೀಣ’ (ವಿಬಿ-ಜಿ ರಾಮ್ ಜಿ) ಯೋಜನೆಯಡಿ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ತಾಲ್ಲೂಕಿನಾದ್ಯಂತ ‘ಜಾಬ್ ಕಾರ್ಡ್ ಮೇಳ’ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಜಶೇಖರ್ ಆಚಾರ್ ತಿಳಿಸಿದರು.
ತಾಲ್ಲೂಕಿನ ಕಂದಿಕೆರೆ ಗ್ರಾಮ ಪಂಚಾಯಿತಿ ಸಮೀಪದ ಬಸ್ ನಿಲ್ದಾಣದಲ್ಲಿ ಕರಪತ್ರ ವಿತರಿಸಿ, ಬೀದಿನಾಟಕ ಮತ್ತು ‘ಜಾಬ್ ಕಾರ್ಡ್ ಮೇಳ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಗಸ್ಟ್ 15 ರಿಂದ ಸೆಪ್ಟಂಬರ್ 15 ರವರೆಗೆ ಉದ್ಯೋಗ ಚೀಟಿ ಇಲ್ಲದ ಎಲ್ಲಾ ರೈತರು, ಕೂಲಿಕಾರರು ಹಾಗೂ ಅರ್ಹ ಗ್ರಾಮೀಣ ಕುಟುಂಬಗಳ ಅರ್ಜಿಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಹೊಸ ರೋಜ್ಗಾರ್ ಗ್ಯಾರಂಟಿ ಕಾರ್ಡ್‌ಗಳನ್ನು ನೀಡಲಾಗುವುದು. ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಉದ್ಯೋಗ ಚೀಟಿ ಪಡೆದುಕೊಂಡು ಯೋಜನೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಜಾಬ್ ಕಾರ್ಡ್ ಹೊಂದಿದ್ದು, ಇ-ಕೆವೈಸಿ (e-KYC) ಪ್ರಕ್ರಿಯೆ ಬಾಕಿ ಇರುವವರು ಈ ಅಭಿಯಾನದ ಮೂಲಕ ತಕ್ಷಣವೇ ಪೂರ್ಣಗೊಳಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ಪ್ರಧಾನ ಕುಟುಂಬಗಳು ಮತ್ತು ಭೂ ರಹಿತ ಕೂಲಿ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಕಾರ್ಡ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಯೋಜನೆಯಡಿ ವಾರ್ಷಿಕ ಉದ್ಯೋಗದ ಅವಧಿಯನ್ನು 100 ದಿನಗಳಿಂದ 125 ದಿನಗಳಿಗೆ ಹಾಗೂ ದಿನದ ಕೂಲಿ ಮೊತ್ತವನ್ನು 370 ರೂ.ಗಳಿಂದ 382 ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಓಂಕಾರಯ್ಯ, ಕರವಸೂಲಿಕಾರ ಕೆ.ಆರ್. ಪರಮೇಶ್ವರಯ್ಯ, ತಾಂತ್ರಿಕ ಸಹಾಯಕರಾದ ಹೊನ್ನೇಶ್ ಬಿ.ಎಸ್, ಕಾವ್ಯ, ನಾಗರಾಜ್, ಡಿಇಒ ಕೆ.ಸಿ. ತೇಜಸ್ ಅರಸ್, ಅರುಣ್, ಬಿಎಫ್‌ಟಿ ಸತೀಶ್, ಜಿಕೆಎಂ ವಿಜಯ ಕುಮಾರಿ, ಪಂಚಾಯಿತಿ ಸಿಬ್ಬಂದಿ, ಗ್ರಾಕೂಸು ಮಹಿಳಾ ಕೂಲಿಕಾರರು, ಸಂಜೀವಿನಿ ಸಂಘದ ಸದಸ್ಯರು, ಕಲಾವಿದರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.