Skip to main content

Police Roundup

ಅತಿವೇಗ ಹಾಗೂ ಅಪಾಯಕಾರಿ ಬೈಕ್ ಸವಾರಿಗೆ ಪೋಲೀಸ್ ಬ್ರೇಕ್: 4 ಯಮಹಾ ಬೈಕ್ ವಶ, ₹9,500 ದಂಡ!

Share News

ಹುಕ್ಕೇರಿ / ಬೆಳಗಾವಿ: ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಬೈಕ್ ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿ, ಅವರ 4 ಯಮಹಾ ಮೋಟಾರ್ ಸೈಕಲ್‌ಗಳನ್ನು ವಶಕ್ಕೆ ಪಡೆದಿರುವ ಘಟನೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

 

​ಘಟನೆಯ ವಿವರ:

ದಿನಾಂಕ 02-09-2026 ರಂದು ಮುಂಜಾನೆ 11 ಗಂಟೆಯ ಸುಮಾರಿಗೆ ಬೆಲ್ಲದ ಬಾಗೇವಾಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ನಾಲ್ವರು ಯುವಕರು ತಮ್ಮ ಯಮಹಾ ಬೈಕ್‌ಗಳನ್ನು ಅಡ್ಡಾದಿಡ್ಡಿಯಾಗಿ, ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ಚಲಾಯಿಸುತ್ತಿದ್ದರು. ಈ ದೃಶ್ಯಗಳನ್ನು ವೀಡಿಯೋ ಮಾಡಿ ‘ayan_b_313’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹರಿಬಿಡಲಾಗಿತ್ತು.

 

​ಈ ಬಗ್ಗೆ ಬೆಲ್ಲದ ಬಾಗೇವಾಡಿ ಗ್ರಾಮದ ಬೀಟ್ ಸಿಬ್ಬಂದಿ ಆರ್.ಯು. ಹನುಮನ್ನವರ (ಸಿ.ಪಿ.ಸಿ 3757) ಅವರಿಗೆ ಮಾಹಿತಿ ಲಭಿಸಿದ್ದು, ಸ್ಥಳೀಯವಾಗಿ ಪರಿಶೀಲನೆ ನಡೆಸಿದಾಗ ಈ ಕೆಳಗಿನ ಆರೋಪಿಗಳು ಕೃತ್ಯ ಎಸಗಿರುವುದು ಕಂಡುಬಂದಿದೆ:

 

​ಅಜರುದ್ದೀನ್ ಇಬ್ರಾಹಿಂ ಗೋಕಾಕ

​ಶ್ರೀನಾಥ ಚೇತನ ಅಲಗುಂಡಿ

​ಪ್ರವೀಣ್ ಬಸವರಾಜ್ ಬಿದರೆ

​ಶಂಕರ ಮಹಾದೇವ ಬಿದರೊಳ್ಳಿ

(ಎಲ್ಲರೂ ಬೆಲ್ಲದ ಬಾಗೇವಾಡಿ ನಿವಾಸಿಗಳು)

 

​ಪೋಲೀಸ್ ಕಾರ್ಯಾಚರಣೆ ಹಾಗೂ ದಂಡ:

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ. ರಾಮರಾಜನ್ (ಐ.ಪಿ.ಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ. ಬಸರಗಿ, ಗೋಕಾಕ್ ಡಿ.ಎಸ್.ಪಿ ಶ್ರೀ ರವಿ ಡಿ. ನಾಯ್ ಮತ್ತು ಹುಕ್ಕೇರಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಎಸ್.ಆರ್. ಗಣಾಚಾರಿ ಅವರ ಮಾರ್ಗದರ್ಶನದಲ್ಲಿ ದಿನಾಂಕ 05-09-2026 ರಂದು ನಾಲ್ವರನ್ನು ಬೈಕ್ ಸಮೇತ ವಶಕ್ಕೆ ಪಡೆಯಲಾಗಿದೆ.

 

​ಆರೋಪಿತರು ಹೆಲ್ಮೆಟ್ ಧರಿಸದೇ ಇರುವುದು, ಚಾಲನಾ ಪರವಾನಗಿ (DL) ಹೊಂದದಿರುವುದು ಹಾಗೂ ವಾಹನಕ್ಕೆ ವಿಮೆ ಮಾಡಿಸದೇ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಮೋಟಾರ್ ವಾಹನ ಕಾಯ್ದೆಯಡಿ ₹9,500/- ದಂಡ ವಿಧಿಸಲಾಗಿದೆ. ಜೊತೆಗೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 285 ಹಾಗೂ 270 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

 

​ಗ್ರಾಮೀಣ ಭಾಗಗಳಲ್ಲಿ ಈ ರೀತಿ ಅಪಾಯಕಾರಿಯಾಗಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವಂತೆ ವಾಹನ ಚಲಾಯಿಸುವವರ ಮೇಲೆ ಇಲಾಖೆಯ ಸಿಸಿಟಿವಿ ಕ್ಯಾಮೆರಾಗಳ ಮೂಲಕ ತೀವ್ರ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಎಚ್ಚರಿಕೆ ನೀಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin