ಹಾಸನ: ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಯುವಕನನ್ನು ಹಾಡಹಗಲೇ ತಲೆಗೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ನಗರದ ಚನ್ನಪಟ್ಟಣ ಸರ್ಕಲ್ ಸಮೀಪದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ನಡೆದಿದೆ.
ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ಹಾಗೂ ಪ್ರಸ್ತುತ ಸಿದ್ದಯ್ಯನಗರ ಬಡಾವಣೆಯಲ್ಲಿ ವಾಸವಿದ್ದ ಮಣಿ ಅಲಿಯಾಸ್ ಮಣಿಕಂಠ (೨೫) ಕೊಲೆಯಾದ ಯುವಕ. ಈತ ನಗರದ ೮೦ ಅಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಉದ್ಯೋಗಿಯಾಗಿದ್ದ.
ಗೃಹಪ್ರವೇಶಕ್ಕೆ ತೆರಳುತ್ತಿದ್ದಾಗ ಕೃತ್ಯ:
ಮಣಿಕಂಠ ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಧ್ಯಾಹ್ನ ಪೆಟ್ರೋಲ್ ಬಂಕ್‌ನಿಂದ ಹೊರಟಿದ್ದ. ಎಪಿಎಂಸಿ ವರೆಗೆ ಬೈಕ್‌ನಲ್ಲಿ ಡ್ರಾಪ್ ಪಡೆದು ಮುಂದೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಆತನ ಮೇಲೆ ದಾಳಿ ನಡೆಸಿ, ತಲೆಗೆ ಬಂಡೆಯಿಂದ ಹೊಡೆದು ಸ್ಥಳದಲ್ಲೇ ಹತ್ಯೆಗೈದು ಪರಾರಿಯಾಗಿದ್ದಾರೆ.
ಮದ್ಯದ ವಿಚಾರಕ್ಕೆ ಗಲಾಟೆ ನಡೆದ ಶಂಕೆ:
ಕೇವಲ ‘ಮದ್ಯ (ಎಣ್ಣೆ)’ ಕುಡಿಯುವ ವಿಚಾರವಾಗಿ ಉಂಟಾದ ಕ್ಷುಲ್ಲಕ ಗಲಾಟೆಯೇ ಈ ಕೃತ್ಯಕ್ಕೆ ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದು, ಹಳೆ ದ್ವೇಷವೇನಾದರೂ ಇತ್ತೇ ಎಂಬ ಬಗ್ಗೆ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
ಸ್ಥಳಕ್ಕೆ ಎಸ್ಪಿ ಶುಭಾನ್ವಿತ ಭೇಟಿ, ಪರಿಶೀಲನೆ:
ಘಟನೆ ನಡೆದ ತಕ್ಷಣವೇ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭಾನ್ವಿತ ಹಾಗೂ ‘ಸೋಕೋ’ (SOCO) ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಜನನಿಬಿಡ ಹೆದ್ದಾರಿಯಲ್ಲಿ ನಡೆದ ಈ ಭೀಕರ ಹತ್ಯೆಯಿಂದ ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ತೀವ್ರ ಆತಂಕ ಆವರಿಸಿತ್ತು.
ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದ್ದು, ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.