ಬೆಂಗಳೂರು: ಫ್ರಾನ್ಸ್ ಮೂಲದ ಜಾಗತಿಕ ಆಹಾರ ಮತ್ತು ಪೌಷ್ಟಿಕಾಂಶ ಕ್ಷೇತ್ರದ ದೈತ್ಯ ಸಂಸ್ಥೆಯಾದ ‘ಡ್ಯಾನೋನ್’ (Danone) ಪ್ರತಿನಿಧಿಗಳೊಂದಿಗೆ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಮಹತ್ವದ ಸಭೆ ನಡೆಸಿದ್ದು, ಕರ್ನಾಟಕದಲ್ಲಿ ಹೂಡಿಕೆ ಹಾಗೂ ಉದ್ಯಮ ವಿಸ್ತರಣೆಯ ಕುರಿತು ಸುದೀರ್ಘ ಚರ್ಚೆ ನಡೆಸಿದೆ.
ಡೇರಿ, ಸಸ್ಯಾಧಾರಿತ ಉತ್ಪನ್ನಗಳು ಹಾಗೂ ವಿಶೇಷ ಪೌಷ್ಟಿಕಾಂಶ ವಲಯದಲ್ಲಿ ವಿಶ್ವದ ೧೨೦ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಡ್ಯಾನೋನ್ ಸಂಸ್ಥೆಗೆ, ದಕ್ಷಿಣ ಭಾರತದಲ್ಲಿ ತನ್ನ ಮುಂದಿನ ಹಂತದ ಬೆಳವಣಿಗೆಗೆ ಕರ್ನಾಟಕವನ್ನು ಪ್ರಮುಖ ‘ಹಬ್’ (Hub) ಆಗಿ ಮಾಡಿಕೊಳ್ಳುವಂತೆ ಅಧಿಕೃತ ಆಹ್ವಾನ ನೀಡಲಾಯಿತು.
ಸಭೆಯ ಪ್ರಮುಖಾಂಶಗಳು:
ಬಲಿಷ್ಠ ಸಾಮರ್ಥ್ಯದ ವಿವರಣೆ: ರಾಜ್ಯದಲ್ಲಿರುವ ವಿಸ್ತಾರವಾದ ಡೇರಿ ಪರಿಸರ ವ್ಯವಸ್ಥೆ (Ecosystem), ಆಹಾರ ಸಂಸ್ಕರಣಾ ಸಾಮರ್ಥ್ಯ, ಬೃಹತ್ ಮಾರುಕಟ್ಟೆ ಹಾಗೂ ರೈತರ ಬಲವಾದ ಜಾಲದ ಕುರಿತು ಸಂಸ್ಥೆಗೆ ಮನವರಿಕೆ ಮಾಡಿಕೊಡಲಾಯಿತು.
ಸಕಾರಾತ್ಮಕ ಸ್ಪಂದನೆ: ಕರ್ನಾಟಕದ ಉದ್ಯಮ ಸ್ನೇಹಿ ವಾತಾವರಣ ಮತ್ತು ಅವಕಾಶಗಳ ಕುರಿತು ತೀವ್ರ ಆಸಕ್ತಿ ವ್ಯಕ್ತಪಡಿಸಿರುವ ಡ್ಯಾನೋನ್ ಸಂಸ್ಥೆಯು, ಮುಂದಿನ ಹಂತದ ಹೂಡಿಕೆ ಸಾಧ್ಯತೆಗಳನ್ನು ಅನ್ವೇಷಿಸಲು ಸಕಾರಾತ್ಮಕವಾಗಿ ಸ್ಪಂದಿಸಿದೆ.
ಜಾಗತಿಕ ಮಟ್ಟದ ಬಂಡವಾಳ ಹೂಡಿಕೆಗಳನ್ನು ರಾಜ್ಯದ ರೈತರು, ಸ್ಥಳೀಯ ಉದ್ಯಮಗಳು ಹಾಗೂ ಡೇರಿ ಕ್ಷೇತ್ರದೊಂದಿಗೆ ಬೆಸೆಯುವ ನಿರಂತರ ಪ್ರಯತ್ನದ ಭಾಗವಾಗಿ ಈ ಸಭೆ ನಡೆದಿದೆ.