Skip to main content

Police Roundup

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ. ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಮುರಳಿ ಬಂಧಿಸಿದ ಹೊಸಮನೆ ಪೊಲೀಸರು

Share News

ಭದ್ರಾವತಿ: ಕುಟುಂಬಕ್ಕೆ ಅಪಾಯವಿದೆ ಎಂದು ವಾಮಾಚಾರದ ಭಯ ಹುಟ್ಟಿಸಿ ಪೂಜೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಖದೀಮನನ್ನು ಹೊಸಮನೆ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಬಂಧಿತ ಆರೋಪಿಯನ್ನು ಮುರಳಿ ಎಂದು ಗುರುತಿಸಲಾಗಿದೆ.

 

​ಪ್ರಕರಣದ ಹಿನ್ನೆಲೆ:

ಭದ್ರಾವತಿಯ ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರನ್ನು ಸಂಪರ್ಕಿಸಿದ್ದ ಆರೋಪಿಗಳು, ನಿಮ್ಮ ಕುಟುಂಬಕ್ಕೆ ವಾಮಾಚಾರದ ಭೀತಿಯಿದ್ದು ದೊಡ್ಡ ಅಪಾಯ ಕಾದಿದೆ ಎಂದು ನಂಬಿಸಿದ್ದರು. ಕುಟುಂಬದ ರಕ್ಷಣೆಗಾಗಿ ವಿಶೇಷ ಪೂಜೆ ನಡೆಸಬೇಕೆಂದು ಹೇಳಿ ಮಹಿಳೆಯಿಂದ 193 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹2 ಲಕ್ಷ ನಗದನ್ನು ಪಡೆದುಕೊಂಡು ಪರಾರಿಯಾಗಿದ್ದರು.

 

​ಚಾಣಾಕ್ಷ ಕಾರ್ಯಾಚರಣೆ – ಆರೋಪಿ ಬಂಧನ:

ವಂಚನೆಗೊಳಗಾದದ್ದು ಅರಿವಿಗೆ ಬರುತ್ತಿದ್ದಂತೆ ಸಂತ್ರಸ್ತೆ ಹೊಸಮನೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೆಲವೇ ಗಂಟೆಗಳಲ್ಲಿ ಪ್ರಮುಖ ಆರೋಪಿ ಮುರಳಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

 

​ಬಂಧಿತನಿಂದ ₹22.50 ಲಕ್ಷ ಮೌಲ್ಯದ 161 ಗ್ರಾಂ ಚಿನ್ನದ ಆಭರಣಗಳು ಹಾಗೂ ಗಿರವಿ ಅಂಗಡಿಯಲ್ಲಿದ್ದ ಮತ್ತು ಕರಗಿಸಿ ಬಚ್ಚಿಡಲಾಗಿದ್ದ ಚಿನ್ನದ ಗಟ್ಟಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

 

​ಪೊಲೀಸ್ ತಂಡಕ್ಕೆ ಶ್ಲಾಘನೆ:

ಭದ್ರಾವತಿ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಅವರ ಮಾರ್ಗದರ್ಶನದಲ್ಲಿ, ಹೊಸಮನೆ ಠಾಣೆಯ ಪಿಎಸ್‌ಐ ಸಿದ್ದಪ್ಪ ಎಂ.ಪಿ. ಅವರ ನೇತೃತ್ವದ ವಿಶೇಷ ಪೊಲೀಸ್ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಕೇವಲ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡದ ಕ್ಷಿಪ್ರ ಕಾರ್ಯಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin