ಅರೇಹಳ್ಳಿ (ಬೇಲೂರು): ಸಾಲದ ಹಣ ವಾಪಸ್ ಕೇಳಿದ ಸಣ್ಣ ವಿಷಯಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಆರಂಭವಾದ ಗಲಾಟೆ ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ತಾಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ.
ಅರೇಹಳ್ಳಿ ನಿವಾಸಿ ಮಹಮದ್ ಸಿದ್ದಿಕ್ (33) ಕೊಲೆಯಾದ ದುರದೃಷ್ಟಕರ ವ್ಯಕ್ತಿ. ಈತನಿಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಸುಜೀತ್ (29) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಸುಮಾರು ಒಂದು ವರ್ಷದ ಹಿಂದೆ ರೇಷ್ಮಾ ಎಂಬುವವರು ತಮ್ಮ ತಂಗಿ ದಿವ್ಯಾಳಿಗೆ 50 ಸಾವಿರ ರೂಪಾಯಿ ಸಾಲ ನೀಡಿದ್ದರು. ಇತ್ತೀಚೆಗೆ ರೇಷ್ಮಾ ತಮ್ಮ ಸಾಲದ ಹಣವನ್ನು ವಾಪಸ್ ನೀಡುವಂತೆ ತಂಗಿ ದಿವ್ಯಾ ಬಳಿ ಕೇಳಿದ್ದಾರೆ. ಹಣದ ವಿಚಾರವಾಗಿ ಅಕ್ಕ-ತಂಗಿಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದು ಅಕ್ಕ ರೇಷ್ಮಾಳ ಪತಿ ಮಹಮದ್ ಸಿದ್ದಿಕ್ ಹಾಗೂ ತಂಗಿ ದಿವ್ಯಾಳ ಪತಿ ಸುಜೀತ್ ನಡುವಿನ ಜಗಳಕ್ಕೆ ಕಾರಣವಾಗಿದೆ.
ಇಬ್ಬರ ನಡುವೆ ಜಗಳ ತಾರಕಕ್ಕೇರಿದಾಗ ಆಕ್ರೋಶಗೊಂಡ ಸುಜೀತ್, ತನ್ನ ಬಳಿಯಿದ್ದ ಕತ್ತರಿಯಿಂದ ಮಹಮದ್ ಸಿದ್ದಿಕ್ಗೆ ಮನಬಂದಂತೆ ಹಲವು ಬಾರಿ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ಸಿದ್ದಿಕ್ನನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿದ್ದಿಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅರೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.