ಬೆಂಗಳೂರು: ರಾಜಧಾನಿಯ ಖ್ಯಾತ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಕೇಳಿಬಂದಿದ್ದ 1.5 ಕೋಟಿ ರೂ. ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ದೂರುದಾರ ಕಾರ್ತಿಕ್ ಸೃಷ್ಟಿಸಿದ್ದ ಎನ್ನಲಾದ ‘ಬ್ಲ್ಯಾಕ್‌ಮೇಲ್’ ಕಥೆಯ ಅಸಲಿಯತ್ತನ್ನು ಆತನ ಸ್ವಂತ ಪತ್ನಿ ಹರ್ಷಿತಾ ಅವರೇ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.
ತಾನು ‘ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕ ಎಂದು ಹೇಳಿಕೊಳ್ಳುತ್ತಿದ್ದ ಕಾರ್ತಿಕ್, ಸಾಧನಾ ಶೆಟ್ಟಿ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದರೆ, ಹರ್ಷಿತಾ ನೀಡಿರುವ ಹೇಳಿಕೆಯ ಪ್ರಕಾರ ಕಾರ್ತಿಕ್ ಕ್ಲಿನಿಕ್‌ನ ಮಾಲೀಕನಲ್ಲ, ಬದಲಿಗೆ ಅಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುವ ಒಬ್ಬ ಸಾಮಾನ್ಯ ಉದ್ಯೋಗಿ ಎಂಬ ಸತ್ಯ ಹೊರಬಿದ್ದಿದೆ.
ಪ್ರೇಮದ ನಾಟಕ ಮತ್ತು ದೌರ್ಜನ್ಯ: ಕಾರ್ತಿಕ್ ಮದುವೆಯಾಗುವುದಾಗಿ ನಂಬಿಸಿ ಸಾಧನಾ ಶೆಟ್ಟಿಯನ್ನು ಹೈದರಾಬಾದ್, ಬೆಂಗಳೂರು ಮತ್ತು ಮಾಲ್ಡೀವ್ಸ್ ಪ್ರವಾಸಕ್ಕೆ ಕರೆದೊಯ್ದಿದ್ದ. ಅಷ್ಟೇ ಅಲ್ಲದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬ ಗಂಭೀರ ಆರೋಪವನ್ನು ಪತ್ನಿ ಹರ್ಷಿತಾ ಮಾಡಿದ್ದಾರೆ.
ಪೂರ್ವಯೋಜಿತ ಸಂಚು: ಸಾಧನಾ ಶೆಟ್ಟಿ ತನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂಬ ಭೀತಿಯಿಂದ, ಕಾರ್ತಿಕ್ ತನ್ನ ಸ್ನೇಹಿತರ ಸಹಾಯದಿಂದ ಆಕೆಯ ಫೋನ್ ಕಳವು ಮಾಡಿಸಿದ್ದ. ನಂತರ ಆಕೆಯನ್ನೇ ಅಪರಾಧಿಯನ್ನಾಗಿ ಬಿಂಬಿಸಲು ‘ಬ್ಲ್ಯಾಕ್‌ಮೇಲ್’ ಎಂಬ ಕಟ್ಟುಕಥೆ ಹೆಣೆದಿದ್ದ ಎಂದು ಹರ್ಷಿತಾ ಆರೋಪಿಸಿದ್ದಾರೆ.
ಸರಣಿ ವಂಚನೆ: ಕಾರ್ತಿಕ್ ಕೇವಲ ಸಾಧನಾ ಅವರಿಗೆ ಮಾತ್ರವಲ್ಲದೆ, ಇನ್ನೂ ಅನೇಕ ಯುವತಿಯರಿಗೆ ಇದೇ ರೀತಿ ವಂಚಿಸಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಪತಿಯ ನಡವಳಿಕೆಯಿಂದ ಬೇಸತ್ತು ಕಳೆದ ಎರಡು ತಿಂಗಳಿಂದ ದೂರವಿದ್ದ ಹರ್ಷಿತಾ, ಈಗ ಆತನ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಎಲ್ಲಾ ದಾಖಲೆಗಳನ್ನು ಕರ್ನಾಟಕ ಮತ್ತು ತೆಲಂಗಾಣ ಡಿಐಜಿ ಸೇರಿದಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ರವಾನಿಸಲಾಗಿದೆ.
ಪರ ಸ್ತ್ರೀಯರ ಜೊತೆ ಸಂಬಂಧವಿಟ್ಟುಕೊಂಡು ಅವರಿಗೆ ವಂಚಿಸಿ, ಮರಳಿ ಅವರ ಮೇಲೆಯೇ ದೂರು ದಾಖಲಿಸಿದ್ದ ಪತಿಗೆ ಈಗ ಸ್ವಂತ ಪತ್ನಿಯೇ ಕಾನೂನಿನ ಪಾಠ ಕಲಿಸಲು ಮುಂದಾಗಿದ್ದಾರೆ. ಜಯನಗರ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.