ಬೆಳಗಾವಿ: ಪ್ರೀತಿಗಾಗಿ ಒಂದಾಗಬೇಕಿದ್ದ ಪ್ರೇಮಿಗಳ ಕಣ್ಣೀರ ಕಥೆ ಕೊನೆಗೂ ಮಹಾ ದುರಂತದಲ್ಲಿ ಅಂತ್ಯಗೊಂಡಿದೆ. ತನ್ನ ಪ್ರಾಣದಂತಿದ್ದ ಪ್ರಿಯತಮೆಯನ್ನು ಹೆತ್ತವರೇ ಮರ್ಯಾದಾ ಹತ್ಯೆ ಮಾಡಿದ ನೋವು ತಾಳಲಾರದೆ, ಪ್ರಿಯತಮ ಆಕೆಯ ಜನ್ಮದಿನದಂದೇ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಕೇತರ ಗ್ರಾಮದಲ್ಲಿ ನಡೆದಿದೆ.
ನದಿಗುಡಕೇತರ ಗ್ರಾಮದ ಕೃಷ್ಣಾ ಸಹದೇವ ಪಾಟೀಲ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸತ್ತೆವ್ವಾ ಸಂತೋಷ ಹೆಳವಿ ಎಂಬಾಕೆಯ ಹುಟ್ಟುಹಬ್ಬದ ದಿನವೇ ಈತ ಜೀವ ಬಿಟ್ಟಿದ್ದಾನೆ.
ಕೃಷ್ಣಾ ಪಾಟೀಲ ಹಾಗೂ ಸತ್ತೆವ್ವಾ ಹೆಳವಿ ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ನಿಶ್ಚಯಿಸಿ ಇತ್ತೀಚೆಗೆ ಮನೆ ಬಿಟ್ಟು ಹೋಗಿದ್ದರು. ಆದರೆ ಪೊಲೀಸರು ಇವರನ್ನು ಪತ್ತೆ ಹಚ್ಚಿ ವಾಪಸ್ ಕುಟುಂಬಸ್ಥರ ವಶಕ್ಕೆ ಒಪ್ಪಿಸಿದ್ದರು.
ಇದರ ಬೆನ್ನಲ್ಲೇ ಸತ್ತೆವ್ವಾಳ ಪೋಷಕರು ಆಕೆಯನ್ನು ಮಹಾರಾಷ್ಟ್ರದ ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ, ಬೇರೆ ಮದುವೆಯಾಗುವಂತೆ ತೀವ್ರ ಒತ್ತಾಯಿಸಿದ್ದರು. ಆದರೆ, “ಕೃಷ್ಣಾನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲ್ಲ, ಒತ್ತಾಯಿಸಿದರೆ ಸಾಯುತ್ತೇನೆ” ಎಂದು ಸತ್ತೆವ್ವಾ ಹಠ ಹಿಡಿದಿದ್ದಳು. ಇದರಿಂದ ಆಕ್ರೋಶಗೊಂಡ ಹೆತ್ತವರೇ ಆಕೆಯನ್ನು ಕ್ರೂರವಾಗಿ ಕೊಲೆ (Honor Killing) ಮಾಡಿದ್ದರು.
ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರಿಂದ ಆತಂಕಗೊಂಡಿದ್ದ ಕೃಷ್ಣಾ ಪಾಟೀಲ, ಆಕೆಯ ತವರು ಮನೆಯವರ ಮೇಲೆ ಸಂಶಯಗೊಂಡು ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಈ ಭೀಕರ ಮರ್ಯಾದಾ ಹತ್ಯೆಯ ರಹಸ್ಯ ಹೊರಬಿದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಈ ಕೇಸ್ ಮಹಾರಾಷ್ಟ್ರದ ಮಿರಜ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.
ಪ್ರಿಯತಮೆ ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಕೃಷ್ಣಾ ತೀವ್ರ ಖಿನ್ನತೆಗೆ ಒಳಗಾಗಿದ್ದನು. ಜೂನ್ 4 ರಂದು ಮೃತ ಸತ್ತೆವ್ವಾಳ ಜನ್ಮದಿನವಾಗಿತ್ತು. ಪ್ರಿಯತಮೆಯ ಹುಟ್ಟುಹಬ್ಬದಂದೇ ತೀವ್ರ ಮನನೊಂದ ಕೃಷ್ಣಾ, ನದಿಗುಡಕೇತರದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಯಮಕನಮರಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಾವೀದ್ ಮುಶಾಪುರೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಪ್ರೀತಿಸಿದ ಹುಡುಗಿಗಾಗಿ ಕೊನೆಯವರೆಗೂ ಹೋರಾಡಿ, ಕೊನೆಗೆ ಆಕೆಯ ನೆನಪಿನಲ್ಲೇ ಯುವಕ ಪ್ರಾಣ ಕಳೆದುಕೊಂಡಿರುವುದು ಇಡೀ ಗ್ರಾಮದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.