ಬೆಂಗಳೂರು: ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವಿನ ವೈಷಮ್ಯ ವಿಕೋಪಕ್ಕೆ ಹೋಗಿದ್ದು, ತಮಿಳುನಾಡಿನಿಂದ ಸ್ನೇಹಿತರನ್ನು ಕರೆಸಿ ಹಲ್ಲೆ ಮಾಡಿಸಿದ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡಲು ಬಂದು ಹಣ ಮತ್ತು ವಸ್ತುಗಳನ್ನು ಕಿತ್ತುಕೊಂಡಿದ್ದರಿಂದ ಆರೋಪಿಗಳ ಮೇಲೆ ಡಕಾಯಿತಿ ಪ್ರಕರಣ ದಾಖಲಾಗಿದೆ.
ಅಭಿನೇಶ್, ಕಲೈ ವೆಂದನ್, ವಿಮಲ್ ರಾಜ್, ಕುಮಾರನ್, ಪ್ರೇಮ್ ಕುಮಾರ್ ಹಾಗೂ ನವೀನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಅಭಿನೇಶ್ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಓದುತ್ತಿದ್ದಾನೆ. ಉಳಿದವರು ಶಿಕ್ಷಣ ಮುಗಿಸಿ ಕೆಲಸ ಮಾಡುತ್ತಿದ್ದವರಾಗಿದ್ದಾರೆ.
ಅಭಿನೇಶ್ ಮತ್ತು ಕೇರಳ ಮೂಲದ ಕೆಲವು ವಿದ್ಯಾರ್ಥಿಗಳ ನಡುವೆ ಕಾಲೇಜಿನಲ್ಲಿ ಸಣ್ಣ ವಿಷಯಕ್ಕೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಅಭಿನೇಶ್, ತಮಿಳುನಾಡಿನಿಂದ ತನ್ನ ಸ್ನೇಹಿತರನ್ನು ಬೆಂಗಳೂರಿಗೆ ಕರೆಸಿದ್ದ. ಏಪ್ರಿಲ್ 17ರ ರಾತ್ರಿ ಸುಮಾರು 10:30ಕ್ಕೆ ಕೇರಳ ಮೂಲದ ವಿದ್ಯಾರ್ಥಿಗಳು ಬಾಡಿಗೆಗೆ ಇದ್ದ ಮನೆಗೆ ನುಗ್ಗಿದ ಆರೋಪಿಗಳು, ಇರ್ಫಾನ್ ಮೊಹಮ್ಮದ್, ಆದರ್ಶ ಸೇರಿದಂತೆ ಒಟ್ಟು ಏಳು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಬರೀ ಹಲ್ಲೆ ಮಾಡುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳನ್ನು ಬೆದರಿಸಿ ಅವರಿಂದ ₹10,000 ಹಣವನ್ನು ಫೋನ್ ಪೇ (PhonePe) ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಾಲ್ಕು ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು ಹಾಗೂ ಒಂದು ಬೈಕ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಸಂತ್ರಸ್ತ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಕೋಣನಕುಂಟೆ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಎರಡು ದ್ವಿಚಕ್ರ ವಾಹನಗಳು, ನಾಲ್ಕು ಮೊಬೈಲ್ ಮತ್ತು 2 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ನೇಹಿತನ ಮೇಲಿನ ಅಭಿಮಾನಕ್ಕೆ ಬಂದು ಈಗ ಡಕಾಯಿತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.