Police Roundup

ಮಾನವೀಯತೆ ಮೆರೆದ ಬ್ಯಾಂಕ್ ಅಧಿಕಾರಿ: ಬಡ ಕುಟುಂಬದ ಮನೆ ಹರಾಜು ಹಾಕುವ ಬದಲು ತಾವೇ ಸಾಲ ತೀರಿಸಿ ಪತ್ರ ಹಸ್ತಾಂತರಿಸಿದ ರಿಯಲ್ ಹೀರೋ!

Share News

ಕೋಯಿಕ್ಕೋಡ್: ಅಧಿಕಾರ, ಕಾನೂನು ಹಾಗೂ ಇಲಾಖೆಯ ಕಠಿಣ ನಿಯಮಗಳ ನಡುವೆಯೂ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೆರೆರಾಜ್ಯ ಕೇರಳದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಸಾಲ ವಸೂಲಾತಿಗಾಗಿ ಬಡ ಕುಟುಂಬವೊಂದರ ಮನೆ ಜಪ್ತಿ ಮಾಡಲು ಹೋದ ಸರ್ಕಾರಿ ಬ್ಯಾಂಕ್ ಅಧಿಕಾರಿಯೊಬ್ಬರು, ಅಲ್ಲಿನ ಕಡು ಬಡತನವನ್ನು ಕಂಡು ಕರಗಿ, ಆ ಕುಟುಂಬದ ಸಂಪೂರ್ಣ ಸಾಲವನ್ನು ತಾವೇ ತೀರಿಸುವ ಮೂಲಕ ತಮ್ಮ ನಿವೃತ್ತಿಯ ದಿನದಂದೇ ಮನೆಯ ಮೂಲ ಪತ್ರಗಳನ್ನು ವಾಪಸ್ ನೀಡಿ ಎಲ್ಲರ ಮನ ಗೆದ್ದಿದ್ದಾರೆ.

​ಕೊಯಿಲಾಂಡಿ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ರಿಕವರಿ ಆಫೀಸರ್ ಆಗಿದ್ದ ಮರ್ಸಿ ಚೆರಿಯಾನ್ ಅವರೇ ಈ ಮಾನವೀಯ ಕಾರ್ಯ ಮಾಡಿದ ರಿಯಲ್ ಹೀರೋ.

 

ಪಂಚಾಯತ್‌ನ ಪುತ್ತೂರ್‌ವಟ್ಟಂ ನಿವಾಸಿ ಜಾನು ಮತ್ತು ಅವರ ಮಗಳು ಪ್ರಮೀಳಾ ಎಂಬುವವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಅನಿವಾರ್ಯವಾಗಿ ತಮ್ಮ ಪುಟ್ಟ ಮನೆಯನ್ನು ಅಡವಿಟ್ಟು ಬ್ಯಾಂಕ್‌ನಿಂದ ₹75,000 ಸಾಲ ಪಡೆದಿದ್ದರು. ಆದರೆ, ತೀವ್ರ ಬಡತನದ ಹಿನ್ನೆಲೆಯಲ್ಲಿ ಅವರಿಗೆ ಸಾಲದ ಕಂತುಗಳನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ನಿಯಮಗಳ ಪ್ರಕಾರ ಬ್ಯಾಂಕ್ ಸಾಲ ವಸೂಲಾತಿಗಾಗಿ ಕಾನೂನು ಕ್ರಮಕ್ಕೆ ಮುಂದಾಗಿ ಮನೆಯನ್ನು ಹರಾಜು ಹಾಕಲು ನಿರ್ಧರಿಸಿತ್ತು.

 

ಈ ಜಾಗವನ್ನು ಅಳತೆ ಮಾಡಿ, ಜಪ್ತಿ ಪ್ರಕ್ರಿಯೆ ನಡೆಸುವ ಅಧಿಕೃತ ಜವಾಬ್ದಾರಿಯನ್ನು ಬ್ಯಾಂಕ್ ಅಧಿಕಾರಿ ಮರ್ಸಿ ಚೆರಿಯಾನ್ ಅವರಿಗೆ ವಹಿಸಲಾಗಿತ್ತು. ಅದರಂತೆ ಕರ್ತವ್ಯದ ಭಾಗವಾಗಿ ಜಾನು ಅವರ ಮನೆಗೆ ಭೇಟಿ ನೀಡಿದ ಮರ್ಸಿ ಅವರಿಗೆ, ಅಲ್ಲಿನ ಕಷ್ಟದ ಪರಿಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದವು. ಆ ಬಡ ಕುಟುಂಬವನ್ನು ಬೀದಿಗೆ ತಳ್ಳಲು ಮನಸ್ಸಿಲ್ಲದೆ, ತಾವೇ ಆ ಸಾಲದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಿರ್ಧರಿಸಿದರು.

 

ಕಳೆದ 2022ರಲ್ಲಿ ₹80,000 ಗೆ ಆ ಸಾಲವನ್ನು ನವೀಕರಿಸಿದ ಮರ್ಸಿ ಚೆರಿಯಾನ್, ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ತಮ್ಮ ಸ್ವಂತ ಹಣದಿಂದ ₹1,500 ಗಳ ಕಂತನ್ನು ಬ್ಯಾಂಕ್‌ಗೆ ಪಾವತಿಸುತ್ತಾ ಬಂದಿದ್ದರು. ಇತ್ತೀಚೆಗೆ ಅವರ ನಿವೃತ್ತಿಯ ದಿನ ಹತ್ತಿರ ಬಂದಾಗ, ಬಾಕಿ ಉಳಿದಿದ್ದ ಇಡೀ ₹41,000 ರೂಪಾಯಿಗಳನ್ನು ಒಂದೇ ಬಾರಿಗೆ ಪಾವತಿಸಿ ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡಿದ್ದಾರೆ.

 

ಬಾಕಿ ಹಣವನ್ನೆಲ್ಲಾ ಪಾವತಿಸಿದ ಮರ್ಸಿ, ಆ ಕುಟುಂಬದ ಮನೆಯ ಮೂಲ ದಾಖಲೆ ಪತ್ರಗಳನ್ನು ಬ್ಯಾಂಕ್‌ನಿಂದ ಬಿಡಿಸಿ ತಂದು ಅವರಿಗೆ ಹಿಂದಿರುಗಿಸಿದರು. ತಮ್ಮ ಅಧಿಕೃತ ಸೇವೆಯ ಕೊನೆಯ ದಿನ, ಮರ್ಸಿ ಚೆರಿಯಾನ್ ಅವರು ಬ್ಯಾಂಕ್‌ನಿಂದ ಬೀಳ್ಕೊಡುಗೆ ಪಡೆಯುವಾಗ ಜಾನು ಮತ್ತು ಪ್ರಮೀಳಾ ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ಕೃತಜ್ಞತೆ ಸಲ್ಲಿಸಿದರು. ಕೇವಲ ನಿಯಮಗಳಿಗಷ್ಟೇ ಸೀಮಿತವಾಗದೆ ಮಾನವೀಯತೆಯನ್ನು ಎತ್ತಿಹಿಡಿದ ಬ್ಯಾಂಕ್ ಅಧಿಕಾರಿ ಮರ್ಸಿ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin