ಮಥುರಾ: ಕಲಿಯುಗದಲ್ಲೂ ಶ್ರವಣಕುಮಾರನನ್ನು ನೆನಪಿಸುವ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. 90 ವರ್ಷದ ವಯೋವೃದ್ಧ ಅತ್ತೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹರ್ಯಾಣ ಮೂಲದ ಗಾಯಕಿಯೊಬ್ಬರು ಸುಮಾರು 260 ಕಿಲೋಮೀಟರ್ ಉದ್ದದ ’84 ಕೋಸ್ ಬ್ರಿಜ್ ಪರಿಕ್ರಮ’ ತೀರ್ಥಯಾತ್ರೆ ಪೂರ್ಣಗೊಳಿಸುವ ಮೂಲಕ ಆಧುನಿಕ ಜಗತ್ತಿಗೆ ಆದರ್ಶಪ್ರಾಯರಾಗಿದ್ದಾರೆ.
ಹರ್ಯಾಣದ ಪ್ರಸಿದ್ಧ ಗಾಯಕಿ ಕಾಜಲ್ ಚೌಧರಿ ಈ ಭಕ್ತಿ ಮತ್ತು ಕರ್ತವ್ಯದ ಮಹತ್ಕಾರ್ಯವನ್ನು ಮಾಡಿದ ಸೊಸೆಯಾಗಿದ್ದಾರೆ.
ಬ್ರಜ್ ಪ್ರದೇಶದ ಪವಿತ್ರ ಧಾರ್ಮಿಕ ಪ್ರದಕ್ಷಿಣೆಯಾದ ’84 ಕೋಸ್ ಬ್ರಿಜ್ ಪರಿಕ್ರಮ’ವನ್ನು ಮಾಡಬೇಕು ಎಂಬುದು ಕಾಜಲ್ ಅವರ 90 ವರ್ಷದ ಅತ್ತೆಯ ದೀರ್ಘಕಾಲದ ಆಸೆಯಾಗಿತ್ತು. ಆದರೆ ವಯೋಸಹಜ ಅಶಕ್ತತೆಯಿಂದಾಗಿ ಅವರಿಗೆ ನಡೆದುಕೊಂಡು ಹೋಗಲು ಸಾಧ್ಯವಿರಲಿಲ್ಲ. ಅತ್ತೆಯ ಅಪರೂಪದ ಆಸೆಯನ್ನು ಈಡೇರಿಸಲು ಸಂಕಲ್ಪ ಮಾಡಿದ ಕಾಜಲ್ ಚೌಧರಿ, ಬೇರೆಯವರ ಸಹಾಯ ಪಡೆಯದೇ ತಾವೇ ಸ್ವತಃ ಅತ್ತೆಯನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆ ಮಾಡಲು ನಿರ್ಧರಿಸಿದರು.
ಬ್ರಜ್ ಭೂಮಿಯ ಈ ಪ್ರದಕ್ಷಿಣೆಯು ಸುಮಾರು 260 ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಿದೆ. ಉತ್ತರ ಪ್ರದೇಶ, ಹರ್ಯಾಣ ಮತ್ತು ರಾಜಸ್ಥಾನದಾದ್ಯಂತ ವಿಸ್ತರಿಸಿರುವ ಈ ಪವಿತ್ರ ಯಾತ್ರೆಯು ಶ್ರೀಕೃಷ್ಣನ ಲೀಲೆಗಳು ಹಾಗೂ ದಂತಕಥೆಗಳಿಗೆ ಸಂಬಂಧಿಸಿದ ಪ್ರಮುಖ ಧಾರ್ಮಿಕ ಸ್ಥಳಗಳ ಮೂಲಕ ಹಾದುಹೋಗುತ್ತದೆ. ಅತ್ಯಂತ ಕಠಿಣವಾದ ಈ ಹಾದಿಯಲ್ಲಿ ವೃದ್ಧೆಯನ್ನು ಹೊತ್ತು ಸಾಗಿದ ಗಾಯಕಿ ಕಾಜಲ್ ಅವರ ಸಾಹಸ ಮತ್ತು ಶ್ರದ್ಧೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಸೊಸೆಯ ಈ ಮಾತೃವಾತ್ಸಲ್ಯ ಮತ್ತು ಭಕ್ತಿಗೆ ಬ್ರಜ್ ಪ್ರದೇಶದ ಭಕ್ತರು ಹಾಗೂ ಸಾರ್ವಜನಿಕರು ಮನಸೋತಿದ್ದು, ಇಂದಿನ ತಲೆಮಾರಿಗೆ ಇದೊಂದು ಅತ್ಯುತ್ತಮ ಉದಾಹರಣೆ ಎಂದು ಶ್ಲಾಘಿಸುತ್ತಿದ್ದಾರೆ.