ಮಥುರಾ (ಉತ್ತರ ಪ್ರದೇಶ): ಆಧ್ಯಾತ್ಮ ಹಾಗೂ ಧಾರ್ಮಿಕತೆಯ ಹೆಸರಿನಲ್ಲಿ ಯುವತಿಯರನ್ನು ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಘೋರ ಕೃತ್ಯವೊಂದು ಉತ್ತರ ಪ್ರದೇಶದ ಮಥುರಾದಲ್ಲಿ ಬೆಳಕಿಗೆ ಬಂದಿದೆ. ಆಧ್ಯಾತ್ಮಿಕ ಗುರುವಿನ ಸೋಗಿನಲ್ಲಿದ್ದ ಐಐಟಿ ಪದವೀಧರನೊಬ್ಬನನ್ನು ಯುಪಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ನಾಸಿಕ್‌ನ ಧಾರ್ಮಿಕ ಗುರು ಅಶೋಕ್ ಖಾರಟ್ ಬಂಧನದ ಬೆನ್ನಲ್ಲೇ ಈ ಮತ್ತೊಂದು ಆಘಾತಕಾರಿ ಪ್ರಕರಣ ಜರುಗಿದ್ದು, ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಒಡಿಶಾ ಮೂಲದ 29 ವರ್ಷದ ಅಭಿಷೇಕ್ ಮಿಶ್ರಾ (ಆಚಾರ್ಯ ನಾರಾಯಣ ದಾಸ್) ಬಂಧಿತ ಆರೋಪಿಯಾಗಿದ್ದು, ಈತನ ಮೊಬೈಲ್‌ನಿಂದ ಬರೋಬ್ಬರಿ 12 ಲೈಂಗಿಕ ದೌರ್ಜನ್ಯದ ವೀಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಅಭಿಷೇಕ್ ಮಿಶ್ರಾ ಪ್ರಸಿದ್ಧ ಐಐಟಿ ರೂರ್ಕಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಉನ್ನತ ಶಿಕ್ಷಿತನಾಗಿದ್ದಾನೆ. ಶಿಕ್ಷಣ ಮುಗಿದ ಬಳಿಕ ಈತ ‘ರಾಧಾ ಕೃಪಾ ಅಮೃತಾ’ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿ, ಅದರಲ್ಲಿ ಭಜನೆಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಧ್ಯಾತ್ಮಿಕ ಭಾಷಣಗಳ ಮೂಲಕ ಅಪಾರ ಅನುಯಾಯಿಗಳನ್ನು ಗಳಿಸಿಕೊಂಡಿದ್ದ. ಮಥುರಾದ ವೃಂದಾವನದಲ್ಲಿ ಆಶ್ರಮ/ಅಪಾರ್ಟ್‌ಮೆಂಟ್ ಮಾಡಿಕೊಂಡಿದ್ದ ಈತ, ಮುಖ್ಯವಾಗಿ ಎಂಜಿನಿಯರಿಂಗ್ ಓದುತ್ತಿರುವ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ಯುವತಿಯರನ್ನೇ ತನ್ನ ಜಾಲಕ್ಕೆ ಬೀಳಿಸಲು ಟಾರ್ಗೆಟ್ ಮಾಡುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಆಧ್ಯಾತ್ಮದ ಮಾತುಗಳಿಂದ ಯುವತಿಯರ ಮನಸ್ಸು ಬದಲಾಯಿಸುತ್ತಿದ್ದ ಈತ, ಮೊದಲು ಅವರನ್ನು ಹೆತ್ತವರಿಂದ ಹಾಗೂ ಕುಟುಂಬದಿಂದ ದೂರ ಉಳಿಯುವಂತೆ ಬ್ರೈನ್ ವಾಶ್ ಮಾಡುತ್ತಿದ್ದ. ತದನಂತರ ಮಥುರಾದಲ್ಲಿದ್ದ ತನ್ನ ಅಪಾರ್ಟ್‌ಮೆಂಟ್‌ಗೆ ಯುವತಿಯರನ್ನು ಕರೆಸಿಕೊಳ್ಳುತ್ತಿದ್ದ. ಅಲ್ಲಿ ಅವರಿಗೆ ಪವಿತ್ರ ಪ್ರಸಾದದ ರೂಪದಲ್ಲಿ ಹಾಲನ್ನು ನೀಡುತ್ತಿದ್ದ ಒಟ್ಟಿಗೆ ಅದರಲ್ಲಿ ತೀವ್ರ ಮತ್ತುಭರಿಸುವ ಕೆಮಿಕಲ್ ಅಥವಾ ಪದಾರ್ಥವನ್ನು ಬೆರೆಸುತ್ತಿದ್ದ. ಯುವತಿಯರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಅವರ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತು ಬಂದ ಬಳಿಕ ಯುವತಿಯರೊಂದಿಗೆ ತನಗೆ ‘ಗಂಧರ್ವ ವಿವಾಹ’ವಾಗಿದೆ ಎಂದು ನಂಬಿಸಿ, ‘ಮೊದಲ ರಾತ್ರಿ’ಯ ಶಾಸ್ತ್ರಗಳ ಹೆಸರಿನಲ್ಲಿ ದೌರ್ಜನ್ಯ ಎಸಗುತ್ತಿದ್ದ ಆರೋಪಿ, ಇಡೀ ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಸಂತ್ರಸ್ತ ಯುವತಿಯರಿಗೆ ಪ್ರಜ್ಞೆ ಬಂದಾಗ ವೀಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಲ್ಲದೆ, ಅವರ ಪೋಷಕರಿಗೂ ಆ ವೀಡಿಯೋಗಳನ್ನು ಕಳುಹಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದ ಎನ್ನಲಾಗಿದೆ.
ಸಂತ್ರಸ್ತೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಉತ್ತರ ಪ್ರದೇಶ ಪೊಲೀಸರು ಆರೋಪಿ ಅಭಿಷೇಕ್ ಮಿಶ್ರಾನನ್ನು ಹೆಡೆಮುರಿ ಕಟ್ಟಿದ್ದಾರೆ. ಪ್ರಸ್ತುತ ಆರೋಪಿಯ ಮೊಬೈಲ್‌ನಲ್ಲಿದ್ದ 12 ಅಶ್ಲೀಲ ಹಾಗೂ ದೌರ್ಜನ್ಯದ ವೀಡಿಯೋಗಳು, ಡಿಜಿಟಲ್ ಪುರಾವೆಗಳು ಹಾಗೂ ಹಲವು ಬ್ಯಾಂಕ್ ಖಾತೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಹಿಂದೆ ಇನ್ನು ದೊಡ್ಡ ಜಾಲವಿದೆಯೇ ಮತ್ತು ಈತನಿಂದ ಇನ್ನು ಎಷ್ಟು ಯುವತಿಯರು ವಂಚನೆಗೆ ಒಳಗಾಗಿದ್ದಾರೆ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.