ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತು ಇಂಧನದ ಮೇಲಿನ ಅವಲಂಬನೆಯನ್ನು ತಗ್ಗಿಸಲು ‘ಗೋಬರ್‌ಧನ್’ ಘಟಕಗಳು ರಾಮಬಾಣವಾಗಿ ಪರಿಣಮಿಸಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದಲ್ಲಿ ಸ್ಥಾಪಿಸಲಾದ 40 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಗೋಬರ್‌ಧನ್ ಘಟಕವು ಈಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಸ್ವರ್ಣವಲ್ಲಿ ಮಠದ ಗೋಶಾಲೆಯಲ್ಲಿ 80ಕ್ಕೂ ಅಧಿಕ ಗೋವುಗಳಿದ್ದು, ಪ್ರತಿದಿನ 400 ಕೆ.ಜಿಗೂ ಹೆಚ್ಚು ಸಗಣಿ ಸಂಗ್ರಹವಾಗುತ್ತದೆ. ಈ ಮೊದಲು ಮಠದ ಅನ್ನದಾಸೋಹ ಹಾಗೂ ಪಾಠಶಾಲೆಯ ವಿದ್ಯಾರ್ಥಿಗಳ ಅಡುಗೆಗಾಗಿ ವಾರ್ಷಿಕವಾಗಿ 2 ರಿಂದ 2.50 ಲಕ್ಷ ರೂಪಾಯಿಗಳನ್ನು ಎಲ್‌ಪಿಜಿ ಸಿಲಿಂಡರ್‌ಗಾಗಿ ಖರ್ಚು ಮಾಡಲಾಗುತ್ತಿತ್ತು. ಈಗ ಈ ಘಟಕದ ಮೂಲಕ ಪ್ರತಿದಿನ 15 ರಿಂದ 18 ಕೆ.ಜಿ ಗ್ಯಾಸ್ ಉತ್ಪಾದನೆಯಾಗುತ್ತಿದ್ದು, ಸಿಲಿಂಡರ್ ವೆಚ್ಚ ಶೂನ್ಯಕ್ಕೆ ಇಳಿದಿದೆ.
ವೆಚ್ಚ: ಈ ಘಟಕದ ಒಟ್ಟು ನಿರ್ಮಾಣ ವೆಚ್ಚ 11.05 ಲಕ್ಷ ರೂಪಾಯಿಗಳು. ಇದರಲ್ಲಿ 10.45 ಲಕ್ಷ ರೂ.ಗಳನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ ಭರಿಸಲಾಗಿದ್ದು, ಉಳಿದ ಮೊತ್ತವನ್ನು ಮಠವೇ ಭರಿಸಿದೆ.
ಉಪ ಉತ್ಪನ್ನ: ಗ್ಯಾಸ್ ಜೊತೆಗೆ ಘಟಕದಿಂದ ಹೊರಬರುವ ‘ಸ್ಲರಿ’ಯನ್ನು (ತಿಳಿ ಕೆಸರು) ಅತ್ಯುತ್ತಮ ಸಾವಯವ ಗೊಬ್ಬರವನ್ನಾಗಿ ಕೃಷಿಗೆ ಬಳಸಲಾಗುತ್ತಿದೆ.
ಸಹಭಾಗಿತ್ವ: ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ (PPP Model) ಅಡಿಯಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.
ಸಗಣಿ ಮತ್ತು ಹಸಿ ತ್ಯಾಜ್ಯದ ಮೂಲಕ ಉತ್ಪಾದನೆಯಾಗುವ ಮಿಥೇನ್ ಅನಿಲವು ಅನ್ನದಾಸೋಹಕ್ಕೆ ವರದಾನವಾಗಿದೆ. ಪರಿಸರ ಸ್ನೇಹಿಯಾದ ಇಂತಹ ಯೋಜನೆಗಳು ಅನ್ನದಾಸೋಹ ನಡೆಯುವ ಮಠ-ಸಂಸ್ಥೆಗಳಿಗೆ ಅತ್ಯಗತ್ಯ.”
– ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ.
”ಉತ್ತರ ಕನ್ನಡ ಜಿಲ್ಲೆಯು ಗೋಬರ್‌ಧನ್ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಸ್ವರ್ಣವಲ್ಲಿ ಮಠದ ಈ ಘಟಕವು ಕಮರ್ಷಿಯಲ್ ಗ್ಯಾಸ್ ಬಳಕೆ ಕಡಿಮೆ ಮಾಡಿ ಹಣಕಾಸಿನ ಉಳಿತಾಯಕ್ಕೂ ದಾರಿಯಾಗಿದೆ.”
– ಡಾ. ದಿಲೀಷ್ ಸಶಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡ.
ಜಿಲ್ಲೆಯಲ್ಲಿ ಈಗಾಗಲೇ ಐದು ಘಟಕಗಳನ್ನು ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮುದಾಯ ಭವನಗಳು, ಹೆಚ್ಚಿನ ಗೋಶಾಲೆಗಳು ಹಾಗೂ ಅನ್ನದಾಸೋಹ ಕೇಂದ್ರಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲು ಜಿಲ್ಲಾ ಪಂಚಾಯಿತಿ ಆಡಳಿತ ಮುಂದಾಗಿದೆ. ವೈಯಕ್ತಿಕ ಹಂತದಲ್ಲೂ ರೈತರು ಇಂತಹ ಘಟಕಗಳನ್ನು ನಿರ್ಮಿಸಿಕೊಂಡರೆ ಆರ್ಥಿಕ ಸದೃಢತೆ ಹಾಗೂ ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು ಎಂಬುದು ಈ ಯೋಜನೆಯ ಮುಖ್ಯ ಆಶಯವಾಗಿದೆ.