ಕಾರವಾರ/ಶಿರಸಿ: ಹೆತ್ತ ಪೋಷಕರು ತಮ್ಮ ಮಗಳು ಹಾಸ್ಟೆಲ್‌ನಲ್ಲಿ ಸುರಕ್ಷಿತವಾಗಿ ಓದಿಕೊಂಡಿದ್ದಾಳೆ ಎಂದು ನಂಬಿದ್ದರೇ, ಇತ್ತ 9ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲೇ ಮಗುವಿಗೆ ಜನ್ಮ ನೀಡಿರುವ ಅತ್ಯಂತ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಂಡಿದ್ದು, ಹಾಸ್ಟೆಲ್‌ಗೆ ಬಂದು ಕೇವಲ ಹತ್ತೇ ದಿನ ಕಳೆಯುವಷ್ಟರಲ್ಲಿ ಈ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಹಾಗೂ ಅಚ್ಚರಿ ಮೂಡಿಸಿದೆ.
ಸುಮಾರು 14 ರಿಂದ 15 ವರ್ಷ ಪ್ರಾಯದ ಈ ಅಪ್ರಾಪ್ತ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯದ ಮಾಹಿತಿ ಪ್ರಕಾರ, ನವಜಾತ ಶಿಶುವಿನ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇತ್ತ ಪೋಷಕರು ದಿಕ್ಕು ತೋಚದಂತಾಗಿದ್ದು, ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಹಾಸ್ಟೆಲ್‌ನಲ್ಲಿ ಅಪ್ರಾಪ್ತೆ ಹೆರಿಗೆಯಾಗಿರುವ ಗಂಭೀರ ವಿಷಯ ತಿಳಿಯುತ್ತಿದ್ದಂತೆಯೇ ಶಿರಸಿ ತಹಶಿಲ್ದಾರ್ ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಅವರು ತಕ್ಷಣವೇ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸ್ಟೆಲ್ ಸಿಬ್ಬಂದಿ ಹಾಗೂ ವಾರ್ಡನ್ ಅವರಿಂದ ಮಾಹಿತಿ ಕಲೆಹಾಕಲಾಗುತ್ತಿದ್ದು, ತನಿಖೆ ಆರಂಭಿಸಲಾಗಿದೆ.
ಉದ್ಭವಿಸಿದೆ ಹತ್ತಾರು ಪ್ರಶ್ನೆಗಳು:
ಕೇವಲ 10 ದಿನಗಳ ಹಿಂದೆಯಷ್ಟೇ ಶಾಲೆಗೆ ಬಂದಿದ್ದ ಬಾಲಕಿ ಗರ್ಭಿಣಿಯಾಗಿದ್ದ ವಿಷಯ ಹಾಸ್ಟೆಲ್ ಸಿಬ್ಬಂದಿಗೆ ಅಥವಾ ಶಿಕ್ಷಕರಿಗೆ ಗೋಚರಿಸಲಿಲ್ಲವೇ?
ಬಾಲಕಿಯ ಈ ಪರಿಸ್ಥಿತಿಗೆ ಕಾರಣ ಯಾರು? ಆಕೆಯನ್ನು ಈ ದೂಷಕ ಕೃತ್ಯಕ್ಕೆ ದೂಡಿದ ಕಾಮುಕ ಯಾರು?
ಬೇಸಿಗೆ ರಜೆಯ ಅವಧಿಯಲ್ಲೇ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಬಾಲಕಿಯ ಹೇಳಿಕೆ ಹಾಗೂ ವೈದ್ಯಕೀಯ ವರದಿ ಬಂದ ಬಳಿಕ ಈ ಇಡೀ ಘಟನೆಯ ಹಿಂದಿರುವ ಅಸಲಿ ಸತ್ಯ ಹೊರಬರಬೇಕಿದೆ.