ಭುವನೇಶ್ವರ: ಒಡಿಶಾದಲ್ಲಿ ಗಣೇಶ ಚತುರ್ಥಿ ಸಂಭ್ರಮದ ನಡುವೆಯೇ ಭಾರಿ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ. ಗಣೇಶ ಮೂರ್ತಿ ವಿಸರ್ಜನೆಗಾಗಿ ನದಿ ಹಾಗೂ ಕೆರೆಗಳಿಗೆ ತೆರಳಿದ್ದ ವೇಳೆ ಸಂಭವಿಸಿದ ಸರಣಿ ಮುಳುಗುವ ದುರಂತಗಳಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದ ವಿವಿಧ ಜಲಮೂಲಗಳಲ್ಲಿ ಒಟ್ಟು 14 ಮುಳುಗುವ ಘಟನೆಗಳು ವರದಿಯಾಗಿದ್ದು, ಗಂಜಾಂ ಜಿಲ್ಲೆಯ ಹಿಂಜಿಲಿಕಟು, ಸುಂದರ್ಗಢ, ಭದ್ರಕ್, ಕೊರಾಪುಟ್ ಹಾಗೂ ಕಲಹಂಡಿ ಜಿಲ್ಲೆಗಳಲ್ಲಿ ಈ ಅನಾಹುತಗಳು ಸಂಭವಿಸಿವೆ. ಜಗತ್ಸಿಂಗ್ಪುರ ಜಿಲ್ಲೆಯ ಎರಸಮಾ ತಾಲೂಕಿನ ಗೋಪಾಲಪುರದ ಒಡನಾಲಾ ನದಿಯಲ್ಲಿ ವಿಸರ್ಜನೆ ವೇಳೆ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಒಡಿಶಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡು 7 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈವರೆಗೆ 9 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ ಇತರರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.