ಚನ್ನಗಿರಿ (ದಾವಣಗೆರೆ): ಅತ್ತೆಯ ಸ್ನೇಹಿತನ ಜೊತೆ ಸೊಸೆ ಅಕ್ರಮ ಸಂಬಂಧ ಹೊಂದಿದ್ದು, ಗಂಡನನ್ನೇ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಭೀಕರ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಅಜ್ಜಿಹಳ್ಳಿಯ ನಿವಾಸಿ ಶಕ್ತಿಕುಮಾರ್ ಎಂಬಾತ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಇದು ಆತ್ಮಹತ್ಯೆ ಎಂದೇ ಭಾವಿಸಲಾಗಿತ್ತು. ಆದರೆ, ಶಕ್ತಿಕುಮಾರ್ನ ಮುಗ್ಧ ಮಗಳು ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದು, ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ.
ಘಟನೆಯ ಹಿನ್ನೆಲೆ:
ಶಕ್ತಿಕುಮಾರ್ ತಾಯಿ ಹಾಲಮ್ಮಳಿಗೆ 15 ವರ್ಷಗಳ ಹಿಂದೆ ಗೋಪಾಲ್ ಎಂಬಾತನ ಪರಿಚಯವಾಗಿ, ಆತನೂ ಅದೇ ಮನೆಯಲ್ಲಿ ವಾಸವಾಗಿದ್ದ. ಇತ್ತೀಚೆಗೆ ಹಾಲಮ್ಮ ಅನಾರೋಗ್ಯದ ಕಾರಣ ಮಗಳ ಮನೆಗೆ ತೆರಳಿದ್ದ ವೇಳೆ, ಗೋಪಾಲ್ ಹಾಗೂ ಶಕ್ತಿಕುಮಾರ್ ಪತ್ನಿ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಈ ಅಕ್ರಮ ಸಂಬಂಧಕ್ಕೆ ಅಡ್ಡಲಾಗಿದ್ದ ಶಕ್ತಿಕುಮಾರ್ಗೆ ತಾಯಿ ಮತ್ತು ಗೋಪಾಲ್ ಸೇರಿ ಮನಸೋಇಚ್ಛೆ ಹಲ್ಲೆ ನಡೆಸಿರುವುದನ್ನು ಮಗಳು ಕಣ್ಣಾರೆ ಕಂಡು ಸಂಬಂಧಿಕರ ಮುಂದೆ ಹೇಳಿದ್ದಾಳೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಇಬ್ಬರೂ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ನೇಣು ಹಾಕಿ ಆತ್ಮಹತ್ಯೆಯ ಕಥೆ ಕಟ್ಟಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬಯಲಾಗಲಿದೆ.