Police Roundup

ಆಘಾತಕಾರಿ: ಅತಿಯಾಗಿ ಕೂಲ್ ಡ್ರಿಂಕ್ಸ್ ಕುಡಿದು 18 ವರ್ಷದ ಕಾಲೇಜು ಯುವಕನ ಎರಡು ಕಿಡ್ನಿ ಫೇಲ್, ಚಿಕಿತ್ಸೆ ಫಲಿಸದೆ ದಾರುಣ ಸಾವು!

Share News

ಯಾದಗಿರಿ/ಹುಣಸಗಿ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ನೀರಿಗಿಂತ ಹೆಚ್ಚಾಗಿ ತಂಪು ಪಾನೀಯಗಳನ್ನು (Cool Drinks) ಕುಡಿಯುವ ಕ್ರೇಜ್ ಅಪಾಯಕಾರಿಯಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಅತಿಯಾಗಿ ಕೂಲ್ ಡ್ರಿಂಕ್ಸ್ ಕುಡಿದ ಪರಿಣಾಮವಾಗಿ ಯುವಕನೊಬ್ಬನ ಎರಡು ಕಿಡ್ನಿಗಳು ವೈಫಲ್ಯಗೊಂಡು (Kidney Failure), ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಅತ್ಯಂತ ದಾರುಣ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

​ಬಡ ಕುಟುಂಬದ ಆಧಾರಸ್ತಂಭವಾಗಬೇಕಿದ್ದ ಯುವಕನೊಬ್ಬ ತಂಪು ಪಾನೀಯಗಳ ಅತಿಯಾದ ವ್ಯಾಮೋಹಕ್ಕೆ ಬಲಿಯಾಗಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಲ್ಲಿ ಮುಳುಗಿಸಿದೆ.

 

ಮೃತ ದುರ್ದೈವಿ ಯುವಕನನ್ನು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ನಿವಾಸಿ ಬಾಲಪ್ಪ (18) ಎಂದು ಗುರುತಿಸಲಾಗಿದೆ. ಈತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಪದವಿ (Degree) ವ್ಯಾಸಂಗ ಮಾಡುತ್ತಿದ್ದ ಪ್ರೆಂಡ್ಲಿ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ.

 

ಪೊಲೀಸ್ ಹಾಗೂ ಆಸ್ಪತ್ರೆ ಮೂಲಗಳ ಮಾಹಿತಿ ಪ್ರಕಾರ, ಮೃತ ಬಾಲಪ್ಪನಿಗೆ ನಿರಂತರವಾಗಿ ಮತ್ತು ಅತಿಯಾಗಿ ಕೂಲ್ ಡ್ರಿಂಕ್ಸ್ ಕುಡಿಯುವ ಕೆಟ್ಟ ಅಭ್ಯಾಸವಿತ್ತು. ದಿನನಿತ್ಯ ಅತಿಯಾದ ಪ್ರಮಾಣದಲ್ಲಿ ಆರ್ಟಿಫಿಷಿಯಲ್ ಶುಗರ್ ಮತ್ತು ಕೆಮಿಕಲ್ ಮಿಶ್ರಿತ ತಂಪು ಪಾನೀಯಗಳನ್ನು ಸೇವಿಸುತ್ತಿದ್ದ ಹಿನ್ನೆಲೆಯಲ್ಲಿ, ಆತನ ದೇಹದ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಇತ್ತೀಚೆಗೆ ಆತನ ಆರೋಗ್ಯ ಸಂಪೂರ್ಣ ಹದಗೆಟ್ಟಾಗ ಪರೀಕ್ಷಿಸಿದ ವೈದ್ಯರಿಗೆ ಎರಡು ಕಿಡ್ನಿಗಳು ಸಂಪೂರ್ಣವಾಗಿ ಫೇಲ್ ಆಗಿರುವುದು ಪತ್ತೆಯಾಗಿತ್ತು.

​ತಕ್ಷಣವೇ ಆತನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತಾದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಬಾಲಪ್ಪ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ.

 

ಬಾಲ ವಯಸ್ಸಿನ ಮಗನನ್ನು ಕಳೆದುಕೊಂಡು ಕಂಗಾಲಾಗಿರುವ ಹೆತ್ತವರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾರುಕಟ್ಟೆಗೆ ಬರುತ್ತಿರುವ ಅಪಾಯಕಾರಿ ಹಾಗೂ ಕೆಮಿಕಲ್ ಯುಕ್ತ ತಂಪು ಪಾನೀಯಗಳೇ ಯುವಕರ ಜೀವಕ್ಕೆ ಕಂಟಕವಾಗುತ್ತಿವೆ ಎಂದು ನಾರಾಯಣಪುರ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಪ್ರಾಣಾಂತಿಕ ಪಾನೀಯಗಳನ್ನು ಸರ್ಕಾರ ತಕ್ಷಣವೇ ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

​ಸದ್ಯ ಈ ಘಟನೆ ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

ಬೇಸಿಗೆ ಇರಲಿ ಅಥವಾ ಯಾವುದೇ ಸೀಸನ್ ಇರಲಿ, ಮಾರುಕಟ್ಟೆಯಲ್ಲಿ ಸಿಗುವ ಆರ್ಟಿಫಿಷಿಯಲ್ ಶುಗರ್ ಮತ್ತು ಕೆಮಿಕಲ್ ಮಿಶ್ರಿತ ಕೂಲ್ ಡ್ರಿಂಕ್ಸ್‌ಗಳಿಂದ ನಿಮ್ಮ ಮಕ್ಕಳನ್ನು ಹಾಗೂ ಯುವಕರನ್ನು ಆದಷ್ಟು ದೂರವಿಡಿ. ದಾಹಕ್ಕೆ ನೈಸರ್ಗಿಕ ನೀರು, ಎಳನೀರು ಅಥವಾ ಮಜ್ಜಿಗೆಯನ್ನು ಬಳಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin