Police Roundup

ಹೆತ್ತ ಮಗುವನ್ನೇ 5 ಲಕ್ಷಕ್ಕೆ ಮಾರಿದ ತಾಯಿ? ಗಂಡ-ಹೆಂಡತಿ ಜಗಳದಲ್ಲಿ ಬೀದಿಗೆ ಬಿದ್ದ ಮಕ್ಕಳು!

Share News

ಬೆಂಗಳೂರು: ದಂಪತಿಗಳ ನಡುವಿನ ಕ್ಷುಲ್ಲಕ ಜಗಳ ತಾರಕಕ್ಕೇರಿ, ಹೆತ್ತ ತಾಯಿಯೇ ತನ್ನ ಮಗುವನ್ನು ಹಣಕ್ಕಾಗಿ ಮಾರಾಟ ಮಾಡಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಗುವನ್ನು ಮಾರಾಟ ಮಾಡಿದ ದೀಪಿಕಾ ಎಂಬಾಕೆ ತನ್ನ ಇಬ್ಬರು ಮಕ್ಕಳನ್ನು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಕ್ರೌರ್ಯ ಮೆರೆದಿದ್ದಾಳೆ.

 

ರವಿ ಬಾಬು ಹಾಗೂ ದೀಪಿಕಾ ದಂಪತಿಗಳು ಕಳೆದ 16 ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು. ಇತ್ತೀಚೆಗೆ ದಂಪತಿಗಳ ನಡುವೆ ಜಗಳವಾಗಿದ್ದು, ಗಂಡನ ಮೇಲಿನ ಕೋಪದಿಂದ ದೀಪಿಕಾ ತನ್ನ ಮೂವರು ಮಕ್ಕಳೊಂದಿಗೆ ಮನೆ ಬಿಟ್ಟಿದ್ದಾಳೆ. ದಾರಿ ಕಾಣದ ಈಕೆ, ಇಬ್ಬರು ಮಕ್ಕಳನ್ನು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಬಳಿ ಅನಾಥವಾಗಿ ಬಿಟ್ಟು, ಕೇವಲ ಎರಡೂವರೆ ವರ್ಷದ ಪುಟ್ಟ ಗಂಡು ಮಗುವನ್ನು ಮಾತ್ರ ತನ್ನೊಂದಿಗೆ ಕರೆದೊಯ್ದಿದ್ದಾಳೆ. ಅದೃಷ್ಟವಶಾತ್ ರೈಲ್ವೇ ನಿಲ್ದಾಣದಲ್ಲಿದ್ದ ಮಕ್ಕಳು ಹೇಗೋ ದಾರಿ ಹುಡುಕಿಕೊಂಡು ತಂದೆಯ ಬಳಿ ಬಂದು ಸೇರಿದ್ದಾರೆ.

 

ತನ್ನೊಂದಿಗೆ ಕರೆದೊಯ್ದಿದ್ದ ಪುಟ್ಟ ಮಗುವನ್ನು ದೀಪಿಕಾ 5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ ಎಂದು ಆಕೆಯ ಪತಿ ರವಿ ಬಾಬು ಗಂಭೀರವಾಗಿ ಆರೋಪಿಸಿದ್ದಾರೆ. “ಈ ಕೃತ್ಯಕ್ಕೆ ಆಕೆಯ ಪೋಷಕರು ಕೂಡ ಸಾಥ್ ನೀಡಿದ್ದಾರೆ. ಮಗುವನ್ನು ಮಾರಾಟ ಮಾಡಿರುವ ಬಗ್ಗೆ ಸ್ವತಃ ಪತ್ನಿಯೇ ಎಲ್ಲರ ಬಳಿ ಹೇಳಿಕೊಂಡಿದ್ದಾಳೆ. ನನ್ನ ಮಕ್ಕಳು ಹೋಗಿ ಮಗುವಿನ ಬಗ್ಗೆ ಕೇಳಿದಾಗ ಅಜ್ಜಿ ಮತ್ತು ಮಾರಾಟಕ್ಕೆ ಸಹಾಯ ಮಾಡಿದ ಮಹಿಳೆ ಮಕ್ಕಳನ್ನು ಗದರಿಸಿ ಕಳುಹಿಸಿದ್ದಾರೆ” ಎಂದು ರವಿ ಬಾಬು ಅಳಲು ತೋಡಿಕೊಂಡಿದ್ದಾರೆ.

 

ಪತ್ನಿ ಕಾಣೆಯಾಗಿರುವ ಬಗ್ಗೆ ಈಗಾಗಲೇ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ರವಿ ಬಾಬು ದೂರು ನೀಡಿದ್ದಾರೆ. ಆದರೆ, “ನನ್ನ ಮಗು ಮಾರಾಟವಾಗಿದೆ ಎಂದು ಮೊರೆ ಇಟ್ಟರೂ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ” ಎಂದು ತಂದೆ ಆರೋಪಿಸಿದ್ದಾರೆ. ಅನಾಥರಾದ ಮಕ್ಕಳು ತಂದೆಯ ಬಳಿ ಸೇರಿದ್ದರೂ, ಎರಡೂವರೆ ವರ್ಷದ ಹಸುಗೂಸಿನ ಸುಳಿವು ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ.

​ದಂಪತಿಗಳ ನಡುವಿನ ಕಲಹಕ್ಕೆ ಅಮಾಯಕ ಮಕ್ಕಳು ಬಲಿಯಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಮಗು ಯಾರ ಕೈ ಸೇರಿದೆ ಎಂಬುದು ಪತ್ತೆಯಾಗಬೇಕಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin