Police Roundup

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ 4 ವರ್ಷದ ಬಾಲಕ: ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ವಿರುದ್ಧ ಆಕ್ರೋಶ

Share News

ಚನ್ನಪಟ್ಟಣ: ನಾಗರಹಾವು ಕಚ್ಚಿ ಚಿಕಿತ್ಸೆಗಾಗಿ ಬಂದಿದ್ದ ನಾಲ್ಕೂವರೆ ವರ್ಷದ ಬಾಲಕನಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದ ಪರಿಣಾಮ, ಬಾಲಕ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ನೇರ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

 

ಕಳೆದ ಏಪ್ರಿಲ್ 28ರಂದು ಸಂಜೆ 5:50ರ ಸುಮಾರಿಗೆ ಸಾತ್ವಿಕ್ ಎಂಬ ಬಾಲಕನಿಗೆ ನಾಗರಹಾವು ಕಚ್ಚಿತ್ತು. ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಬಾಲಕನನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಡಾ. ರಂಜಿತ್ ಎಂಬುವವರು ಮಗುವಿಗೆ ಇಂಜೆಕ್ಷನ್ ನೀಡಿ, ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

 

ಪೋಷಕರು ಕೂಡಲೇ ಮಗುವನ್ನು ಬೆಂಗಳೂರಿನ ಆರ್‌ಆರ್ ನಗರದ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು ಚನ್ನಪಟ್ಟಣ ಆಸ್ಪತ್ರೆಯ ಒಪಿಡಿ (OPD) ಚೀಟಿಯನ್ನು ಪರಿಶೀಲಿಸಿದಾಗ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹಾವು ಕಚ್ಚಿದಾಗ ನೀಡಬೇಕಾದ ಕಡ್ಡಾಯ ವಿಷನಿರೋಧಕ ಚುಚ್ಚುಮದ್ದು ಆಂಟಿ ಸ್ನೇಕ್ ವೆನಮ್ (ASV) ನೀಡುವ ಬದಲಿಗೆ, ವೈದ್ಯರು ಕೇವಲ ಗ್ಯಾಸ್ಟ್ರಿಕ್‌ಗೆ ಸಂಬಂಧಿಸಿದ Rantac ಮತ್ತು TT ಇಂಜೆಕ್ಷನ್ ನೀಡಿರುವುದು ತಿಳಿದುಬಂದಿದೆ.

 

ಸಕಾಲದಲ್ಲಿ ವಿಷನಿರೋಧಕ ಚಿಕಿತ್ಸೆ ಲಭಿಸದ ಕಾರಣ ಮಗುವಿನ ದೇಹದಲ್ಲಿ ವಿಷ ವ್ಯಾಪಿಸಿ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ವೈದ್ಯರು ಮಗುವನ್ನು ಉಳಿಸಿಕೊಳ್ಳಲು ಸತತ ಪ್ರಯತ್ನ ನಡೆಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 30ರಂದು ಸಾತ್ವಿಕ್ ಮೃತಪಟ್ಟಿದ್ದಾನೆ.

 

ವೈದ್ಯರ ಬೇಜವಾಬ್ದಾರಿತನದಿಂದಲೇ ನಾವು ನಮ್ಮ ಮಗುವನ್ನು ಕಳೆದುಕೊಂಡಿದ್ದೇವೆ. ಹಾವು ಕಚ್ಚಿದ ಪ್ರಕರಣದ ಗಂಭೀರತೆ ಅರಿಯದೆ ನಿರ್ಲಕ್ಷ್ಯ ವಹಿಸಿದ ಡಾ. ರಂಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಮಗುವಿನ ತಂದೆ ಮತ್ತು ಕುಟುಂಬಸ್ಥರು ಆಗ್ರಹಿಸಿದ್ದಾರೆ.

​ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಗುವಿನ ಜೀವದ ಜೊತೆ ಆಟವಾಡಿದ ವೈದ್ಯರ ಪರವಾನಗಿ ರದ್ದುಗೊಳಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin