Police Roundup

ಮದುವೆ ನಿರಾಕರಿಸಿದ್ದಕ್ಕೆ ಪಂಜಾಬಿ ಉದಯೋನ್ಮುಖ ಗಾಯಕಿ ಭೀಕರ ಕೊಲೆ: ಕೆನಡಾದಿಂದ ಬಂದು ಕೃತ್ಯ ಎಸಗಿ ಪ್ರೇಮಿ ಪರಾರಿ!

Share News

ಲುಧಿಯಾನ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಒಂದೇ ಕಾರಣಕ್ಕಾಗಿ ಪಂಜಾಬಿ ಸಂಗೀತ ಲೋಕದ ಉದಯೋನ್ಮುಖ ಗಾಯಕಿ ಇಂದರ್ ಕೌರ್ (ಯಶಿಂದರ್ ಕೌರ್) ಅವರನ್ನು ಬಂದೂಕು ತೋರಿಸಿ ಅಪಹರಿಸಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಅಪಹರಣಕ್ಕೊಳಗಾಗಿದ್ದ ಆರು ದಿನಗಳ ಬಳಿಕ, ಲುಧಿಯಾನದ ನೀಲೋ ಕಾಲುವೆಯಲ್ಲಿ ಆಕೆಯ ಶವ ಪತ್ತೆಯಾಗಿದೆ.

 

ಪಂಜಾಬ್‌ನ ಭಾಲೂರ್ ನಿವಾಸಿ ಸುಖ್ವಿಂದರ್ ಸಿಂಗ್, ಗಾಯಕಿ ಇಂದರ್ ಕೌರ್‌ನನ್ನು ಮದುವೆಯಾಗಲು ಬಯಸಿದ್ದ. ಆದರೆ ಇಂದರ್ ಈ ಪ್ರಸ್ತಾಪವನ್ನು ಕಡಾಖಂಡಿತವಾಗಿ ತಿರಸ್ಕರಿಸಿದ್ದಳು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಸುಖ್ವಿಂದರ್, ಕೆನಡಾದಿಂದ ಪಂಜಾಬ್‌ಗೆ ಬಂದು ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

 

​ಮೇ 13ರ ಅಪಹರಣ: ಮೇ 13ರ ಸಂಜೆ ದಿನಸಿ ಸಾಮಗ್ರಿ ತರಲು ಇಂದರ್ ಕೌರ್ ಅವರು ತಮ್ಮ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಕಾರನ್ನು ತಡೆದ ಮುಖ್ಯ ಆರೋಪಿ ಸುಖ್ವಿಂದರ್ ಸಿಂಗ್ ಮತ್ತು ಆತನ ಸಹಚರರು, ಬಂದೂಕು ತೋರಿಸಿ ಇಂದರ್ ಅವರನ್ನು ಅಪಹರಿಸಿದ್ದರು.

​ಕೊಲೆ ಮಾಡಿ ವಿದೇಶಕ್ಕೆ ಪರಾರಿ: ಅಪಹರಣದ ಬಳಿಕ ಇಂದರ್ ಕೌರ್‌ನನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿ, ಶವವನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ನೀಲೋ ಕಾಲುವೆಗೆ ಎಸೆಯಲಾಗಿತ್ತು. ಕೃತ್ಯ ಎಸಗಿದ ತಕ್ಷಣವೇ ಮುಖ್ಯ ಆರೋಪಿ ಸುಖ್ವಿಂದರ್ ಸಿಂಗ್ ಕೆನಡಾಕ್ಕೆ ಪರಾರಿಯಾಗಿದ್ದಾನೆ.

 

ಘಟನೆ ನಡೆದು ಎರಡು ದಿನಗಳ ಬಳಿಕ, ಅಂದರೆ ಮೇ 15 ರಂದೇ ಮುಖ್ಯ ಆರೋಪಿ ಸುಖ್ವಿಂದರ್ ಸಿಂಗ್ ಮತ್ತು ಆತನ ಸಹಚರ ಕರಮ್‌ಜಿತ್ ಸಿಂಗ್ ವಿರುದ್ಧ ಜಮಾಲ್ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ಆದರೂ ಪೊಲೀಸರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಆರೋಪಿ ದೇಶ ಬಿಟ್ಟು ಓಡಿಹೋಗಲು ಸಾಧ್ಯವಾಯಿತು ಎಂದು ಮೃತರ ಸಹೋದರ ಜೋತಿಂದರ್ ಸಿಂಗ್ ಮತ್ತು ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಮಾಲ್ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬಲ್ಬೀರ್ ಸಿಂಗ್, “ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

 

ಇಂದರ್ ಕೌರ್ ಪಂಜಾಬಿ ಪ್ರಾದೇಶಿಕ ಸಂಗೀತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿದ್ದ ನಾಯಕಿಯಾಗಿದ್ದರು. ಅವರ ‘ಸೋನೆ ದಿ ಚಿರ್ಹಿ’, ‘ಜಿಜಾ’, ಮತ್ತು ‘ಸೋಹ್ನಾ ಲಗ್ಡಾ’ ಹಾಡುಗಳು ಪ್ರೇಕ್ಷಕರ ಮನ ಗೆದ್ದು ಸೂಪರ್ ಹಿಟ್ ಆಗಿದ್ದವು. ಸದ್ಯ ಭವಿಷ್ಯದ ದೊಡ್ಡ ಗಾಯಕಿಯಾಗಬೇಕಿದ್ದ ಪ್ರತಿಭೆಯೊಬ್ಬಳ ದುರಂತ ಅಂತ್ಯಕ್ಕೆ ಪಂಜಾಬಿ ಸಂಗೀತ ಲೋಕದ ಗಣ್ಯರು ಹಾಗೂ ದೇಶಾದ್ಯಂತ ಇರುವ ಅವರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin